Site icon Vistara News

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೂ ಮುನ್ನ ಹಿಂಸಾಚಾರ; ನಾಲ್ವರು ಟಿಎಂಸಿ ಕಾರ್ಯಕರ್ತರ ಹತ್ಯೆ

West Bengal violence Security Force

ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ (Bengal Panchayat Polls) ಇಂದು. ಅಲ್ಲಿ ರಾಜ್ಯಾದ್ಯಂತ ಎಲ್ಲ ಪಂಚಾಯಿತಿಗಳಲ್ಲೂ ಬೆಳಗ್ಗೆ 7ಗಂಟೆಯಿಂದಲೇ ಮತದಾನ ಶುರುವಾಗಿದೆ. ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆಯ ದಿನದಿಂದ ಶುರುವಾದ ಹಿಂಸಾಚಾರ (West Bengal Violence) ಶುಕ್ರವಾರ ಅಂದರೆ ಮತದಾನದ ಮುನ್ನಾದಿನ ಭುಗಿಲೆದ್ದಿದೆ. ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೆ ನಾಲ್ವರು ಟಿಎಂಸಿ ಕಾರ್ಯಕರ್ತರ ಹತ್ಯೆಯಾಗಿದೆ. ಹಾಗೇ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಕಾಂಗ್ರೆಸ್​, ಸಿಪಿಎಂ (ಎಂ), ಬಿಜೆಪಿ ಪಕ್ಷಗಳ ಕಾರ್ಯಕರ್ತರ ವಿರುದ್ಧ ತೃಣಮೂಲ ಕಾಂಗ್ರೆಸ್ ಕಿಡಿಕಾರುತ್ತಿದೆ.

ಅತ್ಯಂತ ಹೆಚ್ಚು ಹಿಂಸಾಚಾರ ನಡೆಯುವ, ಸೂಕ್ಷ್ಮ ಪ್ರದೇಶ ಎನ್ನಿಸಿಕೊಂಡಿರುವ ಮುರ್ಶಿದಾಬಾದ್​ನಲ್ಲಿ ಜೂ.15ರಿಂದಲೂ ಸಂಘರ್ಷ ನಡೆಯುತ್ತಲೇ ಇತ್ತು. ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಒಟ್ಟು ಮೂವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ತಡರಾತ್ರಿ ಒಬ್ಬ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.

ಇಲ್ಲಿನ ಕಪಾಸ್ದಂಗ ಏರಿಯಾದಲ್ಲಿ ಟಿಎಂಸಿ ಕಾರ್ಯಕರ್ತ ಬಾಬರ್​ ಅಲಿ ಎಂಬುವನನ್ನು ಹತ್ಯೆ ಮಾಡಲಾಗಿದೆ. ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಬಾಬರ್​ ಅಲಿಯನ್ನು ಮುರ್ಶಿದಾಬಾದ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲೇ ಆತ ಮೃತಪಟ್ಟಿದ್ದ. ಹಾಗೇ ಇನ್ನೊಬ್ಬ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ನಡೆದಿದ್ದು ಇದೇ ಮುರ್ಶಿದಾಬಾದ್ ಜಿಲ್ಲೆಯ ರೇಜಿನಗರ್​ ಎಂಬಲ್ಲಿ. ಕಚ್ಚಾ ಬಾಂಬ್​ ಎಸೆದು ಕೊಲೆ ಮಾಡಲಾಗಿದೆ. ಹಾಗೇ, ಇದೇ ಜಿಲ್ಲೆಯ ಖರ್​ಗ್ರಾಮ್​​ನಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನನ್ನು ಚಾಕುವಿನಿಂದ ಇರಿದು ಉಸಿರು ನಿಲ್ಲಿಸಲಾಗಿದೆ.

ಇದನ್ನೂ ಓದಿ: Bengal Panchayat Polls: ಪಶ್ಚಿಮ ಬಂಗಾಳ ರಣರಂಗ; ಟಿಎಂಸಿ ಕಾರ್ಯಕರ್ತನ ಕೊಲೆ

ಶುಕ್ರವಾರ ತಡರಾತ್ರಿ ಕೂಚ್​ ಬೆಹಾರ್​ನ ಟಿಎಂಸಿ ಬೂತ್​ ಕಮಿಟಿ ಅಧ್ಯಕ್ಷ ಗಣೇಶ್ ಸರ್ಕಾರ್ ಕೊಲೆಯಾಗಿದೆ. ರಾಂಪುರದಲ್ಲಿ ಇವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಅಲಿಪುರ್​ದೌರ್​ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಇನ್ನು ಪೂರ್ವ ಮಿಡ್ನಾಪುರದ ಸೋನಾಚುರಾ ಗ್ರಾಮ ಪಂಚಾಯಿತಿಯ ಟಿಎಂಸಿ ಬೂತ್ ಅಧ್ಯಕ್ಷ ದೇವಕುಮಾರ್​ ರೈ ಮೇಲೆ ಬಿಜೆಪಿ ಕಾರ್ಯಕರ್ತ ಸುಬಲ್ ಮನ್ನಾ ಮತ್ತು ಅವನ ಸಹಾಯಕರು ಸೇರಿ ಹಲ್ಲೆ ನಡೆಸಿದ್ದಾರೆ. ಜಲ್ಪೈಗುರಿಯಲ್ಲಿ ಇಂದಿನ ಚುನಾವಣೆಯ ಟಿಎಂಸಿ ಅಭ್ಯರ್ಥಿಯೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾಗಿ ವರದಿ ಮಾಡಿದೆ. ಈ ಬಗ್ಗೆ ಟಿಎಂಸಿ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ಯಾವುದೇ ಚುನಾವಣೆ ಬಂದರೂ ಹಿಂಸಾಚಾರ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಈ ಬಗ್ಗೆ ಕೋಲ್ಕತ್ತ ಹೈಕೋರ್ಟ್, ಸುಪ್ರೀಂಕೋರ್ಟ್​ಗಳೂ ಕೂಡ ಆತಂಕ ವ್ಯಕ್ತಪಡಿಸಿವೆ. ಪಂಚಾಯಿತಿ ಚುನಾವಣೆ ಮತದಾನದಂದು ಕೇಂದ್ರ ಮೀಸಲು ಪಡೆ ಸಹಾಯ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ/ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದ್ದವು. ಅಷ್ಟೇ ಅಲ್ಲ, ಹಿಂಸಾಚಾರ ನಿಯಂತ್ರಣ ಸಾಧ್ಯವಾಗದೆ ಇದ್ದರೆ, ಚುನಾವಣೆ ನಿಲ್ಲಿಸಿಬಿಡಿ ಎಂದೂ ಕೋಲ್ಕತ್ತ ಹೈಕೋರ್ಟ್ ಹೇಳಿತ್ತು. ಇಂದಿನ ಪಂಚಾಯಿತಿ ಚುನಾವಣೆ ಒಟ್ಟು 73,887 ಪಂಚಾಯಿತಿಗಳಲ್ಲಿ ನಡೆಯುತ್ತಿದೆ. ಒಟ್ಟು 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿನ ಹಿಂಸಾಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ) ಪಕ್ಷದ ಹಲವು ಕಾರ್ಯಕರ್ತರೂ ಗಾಯಗೊಂಡಿದ್ದಾರೆ.

Exit mobile version