Site icon Vistara News

Bharat Bandh: ತಗ್ಗಿದ ಅಗ್ನಿಪಥ್‌ ಹಿಂಸಾಚಾರ; 500ಕ್ಕೂ ಹೆಚ್ಚು ರೈಲು ಸಂಚಾರ ರದ್ದು

Bharat Bandh

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ನ್ನು ವಿರೋಧಿಸಿ ಇಂದು ದೇಶದ ಕೆಲವು ಸಂಘಟನೆಗಳು ಭಾರತ್‌ ಬಂದ್‌ಗೆ (Bharat Bandh)ಕರೆಕೊಟ್ಟಿವೆ. ಆದರೆ ಭಾರತ್‌ ಬಂದ್‌ ಅಂಥ ತೀವ್ರ ಸ್ವರೂಪವನ್ನು ಪಡೆದುಕೊಂಡಿಲ್ಲ. ಅಗ್ನಿಪಥ್‌ ಜಾರಿಯಾದ ದಿನ ಇದ್ದಷ್ಟು ಹಿಂಸೆ ಇಂದಿಲ್ಲ. ಗಲಾಟೆ ತುಸು ಮಟ್ಟಿಗೆ ತಗ್ಗಿದೆ. ಪ್ರತಿಭಟನೆ ತೀವ್ರವಾಗಿ ನಡೆಯಬಹುದಾದ ಪ್ರಮುಖ ಸ್ಥಳಗಳಲ್ಲಿ ರೈಲು ಸಂಚಾರವನ್ನೇ ಬಂದ್‌ ಮಾಡಲಾಗಿದ್ದು, 500ಕ್ಕೂ ಹೆಚ್ಚು ರೈಲುಗಳನ್ನು ಇಂದು ರದ್ದುಗೊಳಿಸಲಾಗಿದೆ. ಪಂಜಾಬ್‌ನ ಜಲಂಧರ್‌, ಅಮೃತ್‌ಸರ್‌ ರೈಲ್ವೆ ಸ್ಟೇಶನ್‌, ದೆಹಲಿಯ ನಿಜಾಮುದ್ದೀನ್‌ ರೈಲ್ವೆ ಸ್ಟೇಶನ್‌, ಬಿಹಾರದ ಪಾಟ್ನಾ, ಗೋಪಾಲ್‌ಗಂಜ್‌ ರೈಲ್ವೆ ಸ್ಟೇಶನ್‌ಗಳಲ್ಲಿ ಬಿಗಿ ಭದ್ರತೆ ಕಲ್ಪಸಲಾಗಿದೆ. ಹಲವು ಕಡೆಗಳಲ್ಲಿ ರೈಲು ಸಂಚಾರ ಇಲ್ಲದ ದೆಹಲಿ ಸೇರಿ ಅನೇಕ ಕಡೆಗಳಲ್ಲಿ ರಸ್ತೆ ಮಾರ್ಗದಲ್ಲಿ ಸಿಕ್ಕಾಪಟೆ ಟ್ರಾಫಿಕ್‌ ಸೃಷ್ಟಿಯಾಗಿತ್ತು.

ಯುವ ಕಾಂಗ್ರೆಸ್ಸಿಗರ ಪ್ರತಿಭಟನೆ
ಅಗ್ನಿಪಥ್‌ ವಿರುದ್ಧ ಹೋರಾಟ, ಬಂದ್‌ಗೆ ಕಾಂಗ್ರೆಸ್‌ ಸೇರಿ ವಿವಿಧ ರಾಜಕೀಯ ಪಕ್ಷಗಳೂ ಬೆಂಬಲ ವ್ಯಕ್ತಪಡಿಸಿವೆ. ಇಂದು ದೆಹಲಿಯ ಶಿವಾಜಿ ಬ್ರಿಜ್‌ ರೈಲ್ವೆ ಸ್ಟೇಶನ್‌ನಲ್ಲಿ ಯುವ ಕಾಂಗ್ರೆಸ್‌ ಹೋರಾಟ ಜೋರಾಗಿತ್ತು. ಹಲವರು ಗುಂಪುಗೂಡಿ ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ನಡೆಸಿ ರೈಲುಗಳನ್ನು ನಿಲ್ಲಿಸಿದ್ದಾರೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಒಬ್ಬಾತ ಗಾಯಗೊಂಡಿದ್ದು ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೊಂದೆಡೆ ತಿಲಕ್‌ ಬ್ರಿಜ್‌ ರೈಲ್ವೆ ಹಳಿಯ ಮೇಲೆ ಸುಮಾರು 16 ಜನರು ನಿಂತು ಪ್ರತಿಭಟನೆ ನಡೆಸುತ್ತಿದ್ದರು. ಅವರೆಲ್ಲರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುಆಗಿ ರೈಲ್ವೆ ಡಿಸಿಪಿ ತಿಳಿಸಿದ್ದಾರೆ. ಹಾಗೇ, ಇವರ್ಯಾರೂ ವಿದ್ಯಾರ್ಥಿಗಳಲ್ಲ. ಕಾಂಗ್ರೆಸ್‌ ಕಾರ್ಯಕರ್ತರೆಂದು ಅನ್ನಿಸುತ್ತದೆ. ಯಾಕೆಂದರೆ ಅವರ ಕೈಯಲ್ಲಿ ಕಾಂಗ್ರೆಸ್‌ ಬಾವುಟಗಳು ಇದ್ದವು ಎಂದೂ ಅವರು ಹೇಳಿದ್ದಾರೆ. ಪ್ರತಿಭಟನೆ ಹೆಚ್ಚಿದ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ. ಅದರಲ್ಲೂ ಗಡಿ ಭಾಗಗಳಲ್ಲಿ ಮತ್ತಷ್ಟು ಭದ್ರತೆ ಒದಗಿಸಲಾಗಿದೆ. ಹೀಗಾಗಿ ದೆಹಲಿ-ನೊಯ್ಡಾ ಮತ್ತು ದೆಹಲಿ-ಗುರ್‌ಗಾಂವ್‌ ಎಕ್ಸ್‌ಪ್ರೆಸ್‌ ವೇಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಪರೀತ ಎನ್ನುವಷ್ಟು ಟ್ರಾಫಿಕ್‌ ಜಾಮ್‌ ಆಗಿತ್ತು.

ಇದನ್ನೂ ಓದಿ: Agnipath | ಅಗ್ನಿಪಥ್‌ ಯೋಜನೆ ವಿರೋಧಿಸಿ ಇಂದು ಭಾರತ ಬಂದ್‌ ಕರೆ, ಹಲವು ರಾಜ್ಯಗಳಲ್ಲಿ ಹೈ ಅಲರ್ಟ್

ಬಿಹಾರದಲ್ಲಿ ರೈಲ್ವೆ ಹಳಿಗಳು ಬ್ಲಾಕ್‌
ಬಿಹಾರದಲ್ಲಿ ಒಟ್ಟು 350 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಾಗಿದ್ದಾಗ್ಯೂ ಪ್ರತಿಭಟನಾಕಾರರು ಫೊರ್ಬೆಸ್‌ಗಂಜ್‌, ಅರಾರಿಯಾ ರೈಲ್ವೆ ಸ್ಟೇಶನಗಳಲ್ಲಿ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟು 20 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಅಗ್ನಿಪಥ್‌ ಜಾರಿಯಾದಾಗಿನಿಂದಲೂ ಅತಿಹೆಚ್ಚು ಪ್ರಮಾಣದ, ಕೆಟ್ಟ ಸ್ವರೂಪದ ಪ್ರತಿಭಟನೆ ನಡೆದಿದ್ದು ಬಿಹಾರದಲ್ಲಿ. ಇಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗಿದೆ. ಹೀಗೆ ವಿನಾಶಕಾರಿ ಪ್ರತಿಭಟನೆ ನಡೆಸಿದ ಸುಮಾರು ೧೯೦ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಗೋಪಾಲಗಂಜ್‌ನಲ್ಲಿ ಸೆಕ್ಷನ್‌ ೧೪೪ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Agnipath | ಬೆಳಗಾವಿ ಬಂದ್‌ ಹಿನ್ನೆಲೆ, ಪೊಲೀಸರಿಂದ ಬಿಗಿ ಬಂದೋಬಸ್ತ್‌; ಬಂದ್‌ಗೆ ಕರೆ ಕೊಟ್ಟಿದ್ಯಾರು?

Exit mobile version