ಲಖನೌ: ಇತರೇ ಹಿಂದುಳಿದ ವರ್ಗಗಳ (OBC) ಜಾತಿ ಆಧಾರಿತ ಜನಗಣತಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡುತ್ತಲೇ ಬಂದಿರುವ ಅಖಿಲ ಭಾರತೀಯ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (BAMCEF) ಮೇ 25 (ಬುಧವಾರ)ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಜಾತಿ ಆಧಾರಿತ ಜನಗಣತಿ ನಡೆಸಲು ಕೇಂದ್ರ ಸರ್ಕಾರಕ್ಕೆ ಎಷ್ಟೇ ಬಾರಿ ಒತ್ತಾಯ ಮಾಡಿದ್ದರೂ ಅದನ್ನು ಸರ್ಕಾರ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ನಮ್ಮ ಮನವಿಯನ್ನು ಪುರಸ್ಕರಿಸುತ್ತಿಲ್ಲ. ಕೇಂದ್ರದ ಈ ನಿರ್ಲಕ್ಷ್ಯದ ವಿರುದ್ಧ ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಬಹುಜನ ಮುಕ್ತಿ ಪಾರ್ಟಿ (ಬಿಎಂಪಿ) ಸಹರಾನ್‌ಪುರ (ಉತ್ತರ ಪ್ರದೇಶ) ಜಿಲ್ಲಾ ಅಧ್ಯಕ್ಷ ನೀರಜ್ ಧೀಮನ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ, ಜಾತಿ ಆಧಾರಿತ ಜನಗಣತಿ ನಡೆಸಬೇಕು ಎಂಬ ಬೇಡಿಕೆ ಸೇರಿ ಒಟ್ಟು 10 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಎದುರು ಇಟ್ಟಿದೆ. ಅವು ಹೀಗಿವೆ..
1. ಚುನಾವಣೆಗಳಲ್ಲಿ ಇವಿಎಂ ಬಳಕೆ ನಿಲ್ಲಿಸಬೇಕು
2. ಖಾಸಗಿ ವಲಯಗಳಲ್ಲೂ ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡಬೇಕು
3. ರೈತರಿಗೆ ಬೆಂಬಲ ಬೆಲೆಯಲ್ಲಿ ಕಾನೂನಾತ್ಮಕ ಖಾತರಿ ನೀಡಬೇಕು
4. ಎನ್‌ಆರ್‌ಸಿ/ಸಿಎಎ/ಎನ್‌ಪಿಆರ್‌ಗಳನ್ನು ಅನುಷ್ಠಾನಗೊಳಿಸಬಾರದು
5. ಹಳೇ ಪಿಂಚಣಿ ಯೋಜನೆಯನ್ನೇ ಪುನಃ ಆರಂಭಿಸಬೇಕು
6. ಒಡಿಶಾ ಮತ್ತು ಮಧ್ಯಪ್ರದೇಶದ ಪಂಚಾಯಿತಿ ಚುನಾವಣೆಗಳಲ್ಲಿ ಪ್ರತ್ಯೇಕ ಒಬಿಸಿ ಮೀಸಲಾತಿ ಪಟ್ಟಿ ಪ್ರಕಟಿಸಬೇಕು
7. ಅರಣ್ಯ ಸಂರಕ್ಷಣೆ ನೆಪದಲ್ಲಿ ಬುಡಕಟ್ಟು ಜನಾಂಗದವರನ್ನು ಸ್ಥಳಾಂತರ ಮಾಡಬಾರದು.
8. ಕೊವಿಡ್ 19 ಲಸಿಕೆ ಕಡ್ಡಾಯ ಎಂದು ಹೇಳಬಾರದು.
9.. ಕೊವಿಡ್ 19 ಲಾಕ್‌ಡೌನ್ ವೇಳೆ ಗುಪ್ತವಾಗಿ ಕೆಲವು ಕಾರ್ಮಿಕ ಕಾನೂನುಗಳನ್ನು ಮಾಡಲಾಗಿದ್ದು, ಅವುಗಳಿಂದ ರಕ್ಷಣೆ ನೀಡಬೇಕು.
ಇದನ್ನೂ ಓದಿ: ದೇಶದ್ರೋಹ ಕಾಯ್ದೆ ಮರುಪರಿಶೀಲನೆ: ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ ಸುಪ್ರೀಂ ಕೋರ್ಟ್