ದೇಗಲೂರ್: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ನವೆಂಬರ್ 7 (ಮಂಗಳವಾರ)ರಂದು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರಿಗಳು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಗೆ ಪ್ರವೇಶ ಮಾಡಿದ್ದು, ಇಂದು (ನ.8) ಗುರುನಾನಕ್ ಜಯಂತಿ ನಿಮಿತ್ತ ಯಾದಗಾರಿ ಬಾಬಾ ಜೋರಾವರ್ ಸಿಂಗ್ ಜೀ ಫತೇಹ್ ಸಿಂಗ್ ಜಿ ಗುರುದ್ವಾರಕ್ಕೆ ಭೇಟಿ ನೀಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಖ್ ಸಂಪ್ರದಾಯದಂತೆ ತಲೆಗೆ ಟೋಪಿ (ಶಿರವಸ್ತ್ರ) ಧರಿಸಿ, ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಗುರುದ್ವಾರಕ್ಕೆ ಭೇಟಿ ಕೊಟ್ಟ ಫೋಟೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ‘ಈ ದೇಶದಲ್ಲಿ ಸಾಮರಸ್ಯ ಮತ್ತು ಸಮಾನತೆ ಮೂಡಲಿ ಎಂದು ರಾಹುಲ್ ಗಾಂಧಿ ಪ್ರಾರ್ಥನೆ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ.
ಸೋಮವಾರ ರಾತ್ರಿ, ಕೈಯಲ್ಲಿ ಮಶಾಲ್ (ಪಂಜು) ಹಿಡಿದು ಮಹಾರಾಷ್ಟ್ರ ಪ್ರವೇಶ ಮಾಡಿದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರ ಪಾದಯಾತ್ರಿಗಳು ಬಳಿಕ ವಿಶ್ರಾಂತಿ ತೆಗೆದುಕೊಂಡರು. ಬೆಳಗ್ಗೆ ಭಾರತ್ ಜೋಡೋ ಯಾತ್ರೆಯನ್ನು ನಾಂದೇಡ್ ಜಿಲ್ಲೆಯ ಬಿಲೋಲಿ ಸಿಟಿಯಲ್ಲಿರುವ ಅಟ್ಕಾಲಿಯಿಂದ ಪ್ರಾರಂಭ ಮಾಡಿದ್ದಾರೆ. ರಾಹುಲ್ ಗಾಂಧಿಯವರಿಗೆ ರಾಹುಲ್ ಗಾಂಧಿಗೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಾದ ಸುಶೀಲ್ಕುಮಾರ್ ಶಿಂಧೆ, ಅಶೋಕ್ ಚೌವಾಣ್, ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ, ಬಾಳಾಸಾಹೇಬ್ ಥೋರಟ್ ಇತರರು ಜತೆಯಾಗಿದ್ದಾರೆ. ಇಂದು ರಾತ್ರಿ ರಾಹುಲ್ ಗಾಂಧಿ ಮತ್ತು ಅವರ ಸಹಚರರು ಇಲ್ಲಿನ ಗೋದಾವರಿ ಮನಾರ್ ಸಕ್ಕರೆ ಕಾರ್ಖಾನೆ ಇರುವ ಬಯಲಿನಲ್ಲಿಯೇ ತಂಗಲಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ರಾಹುಲ್ ಗಾಂಧಿ ಅವರು ಎರಡು ಱಲಿ ನಡೆಸಲಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ: Bharath jodo | ಗೊರವರ ಕುಣಿತಕ್ಕೆ ಮನಸೋತು ಹೆಜ್ಜೆ ಹಾಕಿದ ಸಿದ್ದರಾಮಯ್ಯ, ನೋಡಲು ನೂಕುನುಗ್ಗಲು