ನವ ದೆಹಲಿ: ಶತಮಾನದಲ್ಲೇ ಅತ್ಯಂತ ದೊಡ್ಡ ರಾಜಕೀಯ ಯಾತ್ರೆ ಆಗಿರುವ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಇಂದಿನಿಂದ ಚಾಲನೆ ಸಿಗಲಿದೆ. ನಾಳೆ (ಸೆಪ್ಟೆಂಬರ್ 8) ಮುಂಜಾನೆಯಿಂದ ಕಾಂಗ್ರೆಸ್ ನಾಯಕರು ಕಾಲ್ನಡಿಗೆಯಲ್ಲಿ ಯಾತ್ರೆ ಹೊರಡಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 3570 ಕಿಮೀ ದೂರದ ಈ ಯಾತ್ರೆ, 150 ದಿನಗಳ ಇರಲಿದೆ. ಕಾಂಗ್ರೆಸ್ ನಾಯಕರು ಪ್ರತಿದಿನ 6-7 ತಾಸುಗಳ ಕಾಲ, 22-23 ಕಿಮೀ ದೂರ ನಡೆಯಲು ನಿರ್ಧರಿಸಿದ್ದಾರೆ.
ಅದರಲ್ಲೂ ಎರಡು ಬ್ಯಾಚ್ಗಳಲ್ಲಿ ಇವರು ಪಾದಯಾತ್ರೆ ಮಾಡಲಿದ್ದು, ಮೊದಲ ಬ್ಯಾಚ್ನವರು ಮುಂಜಾನೆ 7ರಿಂದ 10.30ರವರೆಗೆ ಮತ್ತು ಎರಡನೇ ಬ್ಯಾಚ್ನವರು ಮಧ್ಯಾಹ್ನ 3.30ರಿಂದ ಸಂಜೆ 6.30ರವರೆಗೆ ನಡಿಗೆಯಲ್ಲಿ ತೊಡಗುವರು. ಅದರಲ್ಲಿ ಬೆಳಗ್ಗೆ ಹೊತ್ತಿನಲ್ಲಿ ತುಂಬ ಜನ ಇರುವುದಿಲ್ಲ, ಆದರೆ ಸಂಜೆಯ ಬ್ಯಾಚ್ನಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು, ಪ್ರಮುಖರು ಇರುತ್ತಾರೆ ಎಂದೂ ಹೇಳಲಾಗಿದೆ.
ಎಲ್ಲೆಲ್ಲಿ ಹಾದುಹೋಗಲಿದೆ
ಕನ್ಯಾಕುಮಾರಿಯಿಂದ ಹೊರಡಲಿರುವ ಭಾರತ್ ಜೋಡೋ ಯಾತ್ರೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ, 20 ಪ್ರಮುಖ ಪ್ರದೇಶಗಳಲ್ಲಿ ಹಾದು ಹೋಗಲಿದೆ. ಅದರಲ್ಲಿ ಕರ್ನಾಟಕದ ಮೈಸೂರು, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿಗೂ ಜೋಡೋ ಯಾತ್ರೆ ಪ್ರವೇಶ ಮಾಡಲಿದೆ. ಅದರ ಹೊರತಾಗಿ ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ವಿಕಾರಾಬಾದ್, ನಂದೇಡ್, ಜಲಗಾಂವ್, ಜಾಮೋದ್, ಇಂಧೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್, ಜಮ್ಮು, ಶ್ರೀನಗರ ಮೂಲಕ ಕಾಶ್ಮೀರ ತಲುಪಲಿದೆ. ಐದು ತಿಂಗಳಲ್ಲಿ ಈ ಎಲ್ಲ ಪ್ರದೇಶಗಳಲ್ಲಿ ಯಾತ್ರೆ ಸುತ್ತಲಿದೆ.
ಕರ್ನಾಟಕದಲ್ಲಿ ಎಷ್ಟು ದಿನ?
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ 21 ದಿನ ಇರಲಿದೆ. ಸೆಪ್ಟೆಂಬರ್ 30ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕವನ್ನು ಪ್ರವೇಶಿಸುವ ಈ ಯಾತ್ರೆ ಇಲ್ಲಿನ ಒಟ್ಟು 8 ಜಿಲ್ಲೆಗಳಿಂದ 511 ಕಿಮೀ ದೂರವನ್ನು ಕ್ರಮಿಸಲಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಈ ಯಾತ್ರೆಯ ಅಂಗವಾಗಿ ಒಂದು ಬೃಹತ್ ಸಮಾವೇಶ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ಈಗಾಗಲೇ ತಮಿಳುನಾಡಿಗೆ ತೆರಳಿದ್ದು, ಅವರು ಇಂದು ಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಶೇ.30ರಷ್ಟು ಮಹಿಳೆಯರು
ಭಾರತ್ ಜೋಡೋ ಯಾತ್ರೆಯಲ್ಲಿ ತುಂಬ ವಯಸ್ಸಾದ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಿಲ್ಲ. ಈಗ ಇದ್ದವರಲ್ಲೇ ಅತ್ಯಂತ ಹಿರಿಯರು ಎಂದರೆ ರಾಜಸ್ಥಾನದ ಕಾಂಗ್ರೆಸ್ ನಾಯಕ ವಿಜೇಂದ್ರ ಸಿಂಗ್ ಮಹಲ್ವತ್. ಇವರಿಗೆ 58 ವರ್ಷ. ಅತ್ಯಂತ ಕಿರಿಯ ಮುಖಂಡರು ಎಂದರೆ ಅರುಣಾಚಲ ಪ್ರದೇಶದ ಅಜಮ್ ಜೊಂಬ್ಲಾ ಮತ್ತು ಬೆಮ್ ಬಾಯ್. ಇವರಿಬ್ಬರಿಗೂ 25 ವರ್ಷ. ಈ ಪಾದಯಾತ್ರೆಯಲ್ಲಿ ಶೇ. 30ರಷ್ಟು ಮಹಿಳೆಯೂ ಹೆಜ್ಜೆ ಹಾಕಲಿದ್ದಾರೆ.
ಇದನ್ನೂ ಓದಿ: Bharat Jodo Yatra | ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಇಂದಿನಿಂದ ಪ್ರಾರಂಭ; ಸೆ 8ರಿಂದ ಕಾಲ್ನಡಿಗೆ