ಕನ್ಯಾಕುಮಾರಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು (ಭಾನುವಾರ) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ತಾವು ಸಾಗುವ ಮಾರ್ಗದಲ್ಲಿ ರೈತರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತ, ಅವರ ಕಷ್ಟ-ಸುಖ ಆಲಿಸುತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗೆ ಶನಿವಾರ (ಸೆಪ್ಟೆಂಬರ್ 10) ಕನ್ಯಾಕುಮಾರಿಯ ಮಾರ್ತಾಂಡಮ್ನಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಹಿಳಾ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹಿಳೆಯರು ರಾಹುಲ್ ಗಾಂಧಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದು ವಿಶೇಷ.
ರಾಹುಲ್ ಗಾಂಧಿ ಬಳಿ ನರೇಗಾ ಮಹಿಳಾ ಕಾರ್ಮಿಕರು ಮದುವೆ ವಿಚಾರ ಎತ್ತಿದ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಹಾಗೇ, ಎರಡು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ‘ಶನಿವಾರ ಮಧ್ಯಾಹ್ನ ನರೇಗಾ ಮಹಿಳಾ ಕಾರ್ಮಿಕರ ಜತೆ ರಾಹುಲ್ ಗಾಂಧಿ ಸಂವಾದಕ್ಕೆ ಇಳಿದರು. ಆಗ ಮಹಿಳೆಯರು ‘ನಿಮಗೆ ತಮಿಳುನಾಡು ಎಂದರೆ ಇಷ್ಟ ಎಂದು ನಮಗೆ ಗೊತ್ತು. ಹೀಗಾಗಿ ನಿಮಗೆ ಒಬ್ಬಳು ತಮಿಳು ಹುಡುಗಿಯನ್ನೇ ಕೊಟ್ಟು ಮದುವೆ ಮಾಡಲು ನಾವು ಸಿದ್ಧರಿದ್ದೇವೆ’ ಎಂದು ರಾಹುಲ್ ಗಾಂಧಿ ಬಳಿ ಹೇಳಿದರು. ನಮ್ಮ ಆರ್ಜಿ (ರಾಹುಲ್ ಗಾಂಧಿ) ತುಂಬ ಉಲ್ಲಸಿತರಾದಂತೆ ಕಾಣುತ್ತದೆ..ಈ ಫೋಟೋವೇ ಎಲ್ಲವನ್ನೂ ಹೇಳುತ್ತದೆ’ ಎಂದು ಜೈರಾಮ್ ರಮೇಶ್ ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
ಮಹಾತ್ಮ ಗಾಂಧಿ ನರೇಗಾ ಕೂಲಿ ಕಾರ್ಮಿಕರ ಜತೆ ಸಂವಾದ ಭಾರತ್ ಜೋಡೋ ಯಾತ್ರೆಯ ಒಂದು ಭಾಗವೇ ಆಗಿತ್ತು. ಅದಕ್ಕೂ ಮೊದಲು ರಾಹುಲ್ ಗಾಂಧಿ, ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಎನ್ನಿಸಿದ 63 ವರ್ಷದ ವಸಂತಕುಮಾರಿಯನ್ನು ಭೇಟಿಯಾದರು. ಅಷ್ಟೇ ಅಲ್ಲ, ಮಾರ್ತಾಂಡಮ್ನಲ್ಲಿ ಪೌರಕಾರ್ಮಿಕರ ಜತೆಗೂ ಚರ್ಚೆ ನಡೆಸಿದರು. ಕಳೆದ ವರ್ಷ ಜನವರಿಯಲ್ಲಿ ರಾಹುಲ್ ಗಾಂಧಿ ತಮಿಳು ನಾಡಿನಲ್ಲಿ ವಿಲೇಜ್ ಕುಕ್ಕಿಂಗ್ (ಹಳ್ಳಿ ಅಡುಗೆ) ಯೂಟ್ಯೂಬ್ ಚಾನೆಲ್ ಸಿಬ್ಬಂದಿಯನ್ನು ಭೇಟಿ ಮಾಡಿದ್ದರು. ಅವರನ್ನು ಶನಿವಾರವೂ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.
ಅಂದಹಾಗೇ, ಭಾರತ್ ಜೋಡೋ ಯಾತ್ರೆ ಇಂದು ಕೇರಳ ತಲುಪಿದ್ದು, ಬೆಳಗ್ಗೆಯೇ ಅಲ್ಲಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯನ್ನು ಇನ್ನೊಂದೆಡೆ ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ. ಈಗಾಗಲೇ ರಾಹುಲ್ ಗಾಂಧಿ ಧರಿಸಿದ್ದ ಟೀ-ಶರ್ಟ್ ಬೆಲೆ 41 ಸಾವಿರ ರೂಪಾಯಿ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Bharat Jodo Yatra | ಯೇಸು ನಿಜವಾದ ದೇವರು, ಶಕ್ತಿ ದೇವತೆಗಳಂತಲ್ಲ; ರಾಹುಲ್ ಗಾಂಧಿ ಜತೆ ಪಾದ್ರಿ ವಾದ