ನವ ದೆಹಲಿ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ (Bharat Jodo Yatra) ಅಂತಿಮ ಹಂತ ತಲುಪಿದೆ. ಈ ಯಾತ್ರೆ ಸೋಮವಾರ (ಜನವರಿ 30)ದಂದು ಮುಕ್ತಾಯಗೊಳ್ಳಲಿದ್ದು, ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ 12 ಪ್ರತಿಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್ನಿಂದ ಒಟ್ಟು 21 ಪಕ್ಷಗಳಿಗೆ ಆಹ್ವಾನ ನೀಡಿದ್ದರು. ಆದರೆ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಡಿಪಿ ಸೇರಿ 9 ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಇನ್ನುಳಿದಂತೆ ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗ, ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ (NCP), ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ್ (RJD), ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್), ಶಿವಸೇನೆ ಉದ್ಧವ್ ಠಾಕ್ರೆ ಬಣ, ಸಿಪಿಐ (ಎಂ), ಸಿಪಿಐ, ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್, ಜಮ್ಮು-ಕಾಶ್ಮೀರ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಶಿಬು ಸೊರೆನ್ ಅವರ ಜಾರ್ಖಂಡ ಮುಕ್ತಿ ಮೋರ್ಚಾ ಸೇರಿ ಒಟ್ಟು 12 ಪಕ್ಷಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಪುಲ್ವಾಮಾ ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ನಮನ
ಶುಕ್ರವಾರ ಭದ್ರತೆ ಲೋಪ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಭಾರತ್ ಜೋಡೋ ಯಾತ್ರೆ ಶನಿವಾರ ಮತ್ತೆ ಮುಂದುವರಿಯಿತು. ಶನಿವಾರ ಯಾತ್ರೆ ಪ್ರಾರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿಯವರು ಪುಲ್ವಾಮಾ ಉಗ್ರದಾಳಿಯಲ್ಲಿ ಮೃತಪಟ್ಟಿರುವ ಯೋಧರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. 2019ರ ಫೆಬ್ರವರಿ 14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಯೋಧರು ಬಸ್ನಲ್ಲಿ ಹೋಗುತ್ತಿದ್ದಾಗ, ಜೈಷೆ ಮೊಹಮ್ಮದ್ ಸಂಘಟನೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಯೋಧರಿದ್ದ ಬಸ್ಗೆ ಉಗ್ರ ತನ್ನ ಕಾರು ಡಿಕ್ಕಿ ಹೊಡೆಸಿ, ಸ್ಫೋಟಿಸಿದ್ದ. ತತ್ಪರಿಣಾಮ 40 ಯೋಧರು ಮೃತಪಟ್ಟಿದ್ದರು. ಆ ಯೋಧರಿಗೆ ಈಗ ರಾಹುಲ್ ಗಾಂಧಿ ಗೌರವ ಸಮರ್ಪಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘2016ರಲ್ಲಿ ಭಾರತೀಯ ಸೇನೆ ನಡೆಸಿದ್ದ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ಗೆ ಪುರಾವೆ ಕೇಳಿದ್ದರು. ದಾಳಿ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುತ್ತದೆ. ಭಾರತದ ಯೋಧರು ಉಗ್ರರನ್ನು ಹತ್ಯೆ ಮಾಡಿದರು ಎಂಬುದಾಗಿ ಪ್ರಸ್ತಾಪಿಸುತ್ತದೆ. ಆದರೆ, ಇದುವರೆಗೆ ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಒದಗಿಸಿಲ್ಲ. ಹಾಗೆಯೇ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಲೇ 2019ರಲ್ಲಿ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಯಿತು ಎಂದು ಹೇಳಿದ್ದರು. ದಿಗ್ವಿಜಯ ಸಿಂಗ್ ಮಾತನ್ನು ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಷ್ಟೇ ಅಲ್ಲ, ರಾಹುಲ್ ಗಾಂಧಿಯವರೂ ಸೂಕ್ಷ್ಮವಾಗಿಯೇ ತಿರುಗೇಟು ನೀಡಿ, ಸೇನೆ ಯಾವುದಕ್ಕೂ ಸಾಕ್ಷಿ ಕೊಡಬೇಕಿಲ್ಲ ಅಂದಿದ್ದರು. ಅದರ ಬೆನ್ನಲ್ಲೇ ಈಗ ಪುಲ್ವಾಮಾ ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ನಮನ ಸಲ್ಲಿಸಿದ್ದು, ಮಹತ್ವ ಪಡೆದಿದೆ.