ಸೂರತ್: ಗುಜರಾತ್ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ ಗಂಭೀರವಾಗಿ ಪರಿಗಣಿಸಿಕೊಂಡಿದೆ. ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಲ್ಲಿಗೆ ಪದೇಪದೆ ಭೇಟಿಕೊಟ್ಟು ಭರ್ಜರಿ ಪ್ರಚಾರ ನಡೆಸಿದ್ದಾರೆ. ಆಡಳಿತದಲ್ಲಿರುವ ಬಿಜೆಪಿಯನ್ನು ಹೇಗಾದರೂ ಸೋಲಿಸಬೇಕು, ಬಿಜೆಪಿ ಭದ್ರಕೋಟೆಯನ್ನು ಭೇದಿಸಿ, ಆಪ್ ಸರ್ಕಾರ ರಚನೆ ಮಾಡುವ ಮಹದಾಶಯ ಹೊಂದಿರುವ ಕೇಜ್ರಿವಾಲ್ ಗುಜರಾತ್ ಜನರಿಗೆ ಹಲವು ಭರವಸೆಗಳನ್ನು ಕೊಟ್ಟಿದ್ದಾರೆ. ಗುಜರಾತ್ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿದ್ದು, ಸೋಮವಾರ (ನ.28)ದಂದು ಕೇಜ್ರಿವಾಲ್ ಗುಜರಾತ್ನ ಸೂರತ್ಗೆ ಭೇಟಿ ಕೊಟ್ಟು ಪ್ರಚಾರ ನಡೆಸಿದ್ದಾರೆ. ಇಲ್ಲಿ ಅವರು ಮುಖ್ಯವಾಗಿ ಡೈಮಂಡ್ ವ್ಯಾಪಾರಿಗಳು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮಾತನಾಡಿದ ಅವರು ‘ಸೂರತ್ನಲ್ಲಿರುವ ವಜ್ರದ ಉದ್ಯಮಿಗಳು, ಆಭರಣ ವ್ಯಾಪಾರಿಗಳು ದೇಶದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಬೇಕು’ ಎಂದು ಹೇಳಿದ್ದಾರೆ.
ಸೋಮವಾರ ಸೂರತ್ಗೆ ತೆರಳಿದ ಕೇಜ್ರಿವಾಲ್, ವಜ್ರ ಕತ್ತರಿಸುವ, ಪಾಲಿಶ್ ಮಾಡುವ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಕುಂದುಕೊರತೆಗಳನ್ನು ಆಲಿಸಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ಇಂದು ಇಲ್ಲಿ ಅನೇಕ ವಜ್ರದ ವ್ಯಾಪಾರಿಗಳು, ಕಾರ್ಮಿಕರು ಆಗಮಿಸಿದ್ದಾರೆ. ಇವರೆಲ್ಲ ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಹೆಮ್ಮೆ. ಜಗತ್ತಿನ ಒಟ್ಟಾರೆ ವಜ್ರದ ಉತ್ಪಾದನೆಯ ಮೂರನೇ ಒಂದು ಭಾಗದಷ್ಟು ಸೂರತ್ನಲ್ಲಿಯೇ ಆಗುತ್ತದೆ. ಇಲ್ಲಿಂದಲೇ ರಫ್ತು ಮಾಡಲಾಗುತ್ತದೆ. ನೀವೆಲ್ಲ ವಜ್ರಾಭರಣಗಳನ್ನು ತಯಾರಿಸುವವರು, ಆದರೆ ನನ್ನ ಕಣ್ಣಲ್ಲಿ ನೀವೇ ವಜ್ರಗಳು’ ಎಂದು ಹೇಳಿದ್ದಾರೆ.
ವಜ್ರದ ವ್ಯಾಪಾರಿಗಳು, ಕೆಲಸಗಾರರು ದೇಶಕ್ಕೆ ಇಷ್ಟೆಲ್ಲ ಕೊಡುಗೆ ಕೊಡುತ್ತಿದ್ದರೂ ಅವರಿಗಾಗಿ ಸರ್ಕಾರ ಸೂಕ್ತ ಸೌಕರ್ಯ ನೀಡುತ್ತಿಲ್ಲ. ಇನ್ನು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆಯಲು ಇವರೆಲ್ಲ ನೂರೆಂಟು ಪಡಿಪಾಟಲು ಪಡುತ್ತಿದ್ದಾರೆ ಎಂಬುದನ್ನು ನಾನು ಕೇಳ್ಪಟ್ಟೆ. ಹಾಗಾಗಬಾರದು, ನಿಜ ಹೇಳಬೇಕೆಂದರೆ ಇವರಿಗೆಲ್ಲ ಭಾರತ ರತ್ನ ಪ್ರಶಸ್ತಿ ನೀಡಬೇಕು. ಅವರು ದೇಶಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡುತ್ತಿದ್ದಾರೆ’ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ವಜ್ರದ ಉದ್ಯಮಿಗಳಿಗೆ ಸಾಲ ಸೌಕರ್ಯ ನೀಡಲಾಗುವುದು. ಉದ್ಯಮಿಗಳಿಗೆ ಆಗಬಹುದಾದ ವಂಚನೆ ತಪ್ಪಿಸಲು ವಿಶೇಷ ಕಾನೂನು ತರಲಾಗುವುದು’ ಎಂದು ಹೇಳಿದ್ದಾರೆ. ಹಾಗೇ, ಅವರ ಕೆಲಸದ ಸ್ಥಳದ ಬಾಡಿಗೆ ಕಡಿಮೆ ಮಾಡಲೂ ಕ್ರಮ ಕೈಗೊಳ್ಳುತ್ತೇವೆ ಎಂದೂ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Gujarat Election | ಗುಜರಾತ್‌ನಲ್ಲಿ 92 ಸೀಟು ಗೆದ್ದು ಸರ್ಕಾರ ರಚನೆ: ಆಪ್ ನಾಯಕ ಕೇಜ್ರಿವಾಲ್ ಲಿಖಿತ ಭವಿಷ್ಯ