ಮುಂಬಯಿ: ಶಿವಸೇನೆ ಪಕ್ಷದ ಚಿಹ್ನೆಯಾದ ಬಿಲ್ಲು-ಬಾಣ ಮತ್ತು ಹಣಕಾಸಿನ ವ್ಯವಹಾರವನ್ನು ತೆಕ್ಕೆಗೆ ಪಡೆದ ಏಕನಾಥ್ ಶಿಂಧೆ (Eknath Shinde)ಬಣ ಮಂಗಳವಾರ ತನ್ನ ಮೊದಲ ಕಾರ್ಯಕಾರಿಣಿ ಸಭೆಯನ್ನು ನಡೆಸಿತು. ಹೀಗೆ ನಡೆಸಿದ ತನ್ನ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಪ್ರಸ್ತಾಪಿಸಿದ ಏಕನಾಥ್ ಶಿಂಧೆ ಬಣ, ಬಹಳ ಪ್ರಮುಖವಾಗಿ ‘ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು (Bharat Ratna to Savarkar)’ ಎಂಬ ನಿರ್ಣಯವನ್ನೂ ಪ್ರಸ್ತಾಪ ಮಾಡಿದೆ.
ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಸಿಎಂ ಏಕನಾಥ್ ಶಿಂಧೆ ವಹಿಸಿದ್ದರು. ‘ರಾಜ್ಯದಲ್ಲಿ ಶೇ.80ರಷ್ಟು ಉದ್ಯೋಗವನ್ನು ಈ ಮಣ್ಣಿನ ಮಕ್ಕಳಿಗೆ ಮೀಸಲಿಡುವುದು’, ಮರಾಠಿ ಭಾಷೆಗೆ ಅಭಿಜಾತ ಭಾಷೆ ಸ್ಥಾನಮಾನ ನೀಡುವುದು, ಯುಪಿಎಸ್ಸಿ ಮತ್ತು ಎಂಪಿಎಸ್ಸಿ ಕ್ಷೇತ್ರದಲ್ಲಿ ಮರಾಠಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು ಮತ್ತು ಚರ್ಚ್ಗೇಟ್ ರೈಲ್ವೆ ಸ್ಟೇಶನ್ಗೆ ಮಾಜಿ ಕೇಂದ್ರ ಹಣಕಾಸು ಸಚಿವ ಚಿಂತಾಮನ್ರಾವ್ ದೇಶಮುಖ್ ಹೆಸರನ್ನು ಮರುನಾಮಕರಣ ಮಾಡುವುದು ಇನ್ನಿತರ ಪ್ರಮುಖ ನಿರ್ಣಯಗಳಾಗಿವೆ.
ಇದನ್ನೂ ಓದಿ: Uddhav Thackeray: ‘ರಾಮನ ಬಾಣ ರಾವಣನ ಕೈಯಲ್ಲಿರುವುದು ಭೂಷಣ ಅಲ್ಲ’, ಉದ್ಧವ್ ಠಾಕ್ರೆ ವ್ಯಂಗ್ಯ
ಶಿವಸೇನೆಯಲ್ಲಿ ಎರಡು ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ ಶಿಂಧೆ ಬಣ ಆದಾಗಿನಿಂದಲೂ ಪಕ್ಷದ ಚಿಹ್ನೆ ಯಾರಿಗೆ ಸೇರಬೇಕು? ನಿಜವಾದ ಶಿವಸೇನೆ ಯಾರದ್ದು ಎಂಬ ಜಟಾಪಟಿ ನಡೆಯುತ್ತಲೇ ಇತ್ತು. ಇತ್ತೀಚೆಗೆ ಚುನಾವಣಾ ಆಯೋಗ ಉದ್ಧವ್ ಠಾಕ್ರೆ ಬಣಕ್ಕೆ ಅಕ್ಷರಶಃ ಶಾಕ್ ನೀಡಿದೆ. ಪಕ್ಷದ ಚಿಹ್ನೆಯಾದ ಬಿಲ್ಲು-ಬಾಣವನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿದೆ. ಅದರ ವಿರುದ್ಧ ಉದ್ಧವ್ ಠಾಕ್ರೆ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ, ಸದ್ಯ ವಿಚಾರಣೆ ನಡೆಯುತ್ತಿಲ್ಲ. ಅಂದಹಾಗೇ, ಇತ್ತೀಚೆಗೆ ಉದ್ಧವ್ ಠಾಕ್ರೆ ಬಣ ಕೂಡ ವೀರ್ ಸಾವರ್ಕರ್ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದೆ.