ಮುಂಬಯಿ: ಮಹಿಳಾ ರೂಪದರ್ಶಿಗಳನ್ನು (Women Models) ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಭೋಜಪುರಿ ನಟಿ ಸುಮನ್ ಕುಮಾರಿ (24) (Suman Kumari)ಯನ್ನು ಮುಂಬಯಿ ಪೊಲೀಸ್ ಸೋಷಿಯಲ್ ಸರ್ವೀಸ್ ಶಾಖೆ ಪೊಲೀಸರು ಬಂಧಿಸಿದ್ದಾರೆ. ಮುಂಬಯಿ ಗೋರೆಗಾಂವ್ನ ರಾಯಲ್ ಪಾಮ್ ಹೋಟೆಲ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ. ಇಲ್ಲಿ ಮಾಡೆಲ್ಗಳನ್ನು ವೇಶ್ಯಾವೃತ್ತಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ಹೋಟೆಲ್ ಮೇಲೆ ಶುಕ್ರವಾರ ದಾಳಿ ನಡೆಸಲಾಗಿತ್ತು. ಅದಾದ ಮೇಲೆ ಸುಮನ್ ಕುಮಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೋಟೆಲ್ ಮೇಲೆ ದಾಳಿ ನಡೆಸಿದ ಬಳಿಕ ಅಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಮುಖ್ಯ ಆರೋಪಿ ಸುಮನ್ ಕುಮಾರಿ ಭೋಜ್ಪುರಿ ನಟಿಯಾಗಿದ್ದು, ಆಕೆ ಮಾಡೆಲ್ಗಳನ್ನು ವೇಶ್ಯಾವಾಟಿಕೆಗೆ ಇಳಿಸುತ್ತಿದ್ದಳು. ಸಿನಿಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಬರುವ ಮಾಡೆಲ್ಗಳು, ಯುವತಿಯರನ್ನು ನಟಿ ಸುಮನ್ಕುಮಾರಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಳು. ಅದರಲ್ಲೂ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಹಣದ ಆಮಿಷವೊಡ್ಡಿ ಅವರನ್ನು ಬೇಕಾದಂತೆ ಬಳಸಿಕೊಳ್ಳುತ್ತಿದ್ದಳು. ಈಕೆ ಅಡ್ಡಕ್ಕೆ ಬರುವ ಪುರುಷರಿಗೆ ಅವರು ಕೇಳುವ ಯುವತಿಯನ್ನೇ ಕೊಡುತ್ತಿದ್ದಳು. ಒಬ್ಬ ಹುಡುಗಿಗೆ 50 ಸಾವಿರದಿಂದ 80 ಸಾವಿರ ರೂ.ವರೆಗೆ ಚಾರ್ಜ್ ಮಾಡುತ್ತಿದ್ದಳು’ ಎಂದು ಪೊಲಿಸರು ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, 3 ವರ್ಷದಿಂದ ದೌರ್ಜನ್ಯ, ಇಬ್ಬರು ಅರೆಸ್ಟ್
ಸುಮನ್ಕುಮಾರಿ ಹೆಸರುಮಾತಿನ ನಟಿಯಾಗಿದ್ದಾಳೆ. ಲೈಲಾ ಮಜ್ನು, ಬಾಪ್ ನಂಬರಿ, ಬೇಟಾ ದಸ್ ನಂಬರಿ ಮತ್ತಿತರ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಹಿಂದಿ, ಪಂಜಾಬಿ ಮತ್ತು ಭೋಜಪುರಿ ಭಾಷೆಗಳಲ್ಲಿ ವಿವಿಧ ವಿಡಿಯೊ ಹಾಡುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾಳೆ. ಸದ್ಯ ಆಕೆ ಬಂಧನದಲ್ಲಿ ಇಡಲಾಗಿದೆ. ಎಫ್ಐಆರ್ ದಾಖಲಿಸಲಾಗಿದೆ. ಹಾಗೇ, ಕುಮಾರಿ ಮತ್ತು ಗಿರಾಕಿಗಳ ನಡುವೆ ಸಂಪರ್ಕವಾಗಿ ಇದ್ದ ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಆತನ ಪತ್ತೆ ಕಾರ್ಯನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ಗೋರೆಗಾಂವ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕಿರುತೆರೆ ನಟಿ ಆರತಿ ಮಿತ್ತಲ್ ಬಂಧನವಾಗಿತ್ತು. ಇದೀಗ ಸುಮನ್ ಕುಮಾರಿ ಬಂಧನದ ಬೆನ್ನಲ್ಲೇ ಮುಂಬಯಿ ಪೊಲೀಸರು ಹಲವು ಪ್ರದೇಶಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾವೆಲ್ಲ ಸ್ಥಳಗಳಲ್ಲಿ ವೇಶ್ಯಾವಾಟಿಕೆ ನಡೆಯಬಹುದಾದ ಸಾಧ್ಯತೆ ಇದೆಯೋ, ಅಲ್ಲೆಲ್ಲ ಪರಿಶೀಲನೆ ಮಾಡಲಾಗುತ್ತಿದೆ.