ನವ ದೆಹಲಿ: 1984ರ ಡಿಸೆಂಬರ್ನಲ್ಲಿ ಭೋಪಾಲ್ನಲ್ಲಿ ನಡೆದಿದ್ದ ಭೀಕರ ಅನಿಲ ದುರಂತ (Bhopal Gas Tragedy)ದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮತ್ತು ಅಸ್ವಸ್ಥರಾದವರಿಗೆ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಅಮೆರಿಕ ಮೂಲದ ರಾಸಾಯನಿಕ ಕಂಪನಿ) ಹೆಚ್ಚುವರಿ ಪರಿಹಾರ ಹಣ ನೀಡಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಭೋಪಾಲ್ನಲ್ಲಿದ್ದ ಅಮೆರಿಕ ಮೂಲದ ಕಂಪನಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ನಲ್ಲಿ ಮಿಥೈಲ್ ಐಸೋಸೈನೇಟ್ ವಿಷಾನಿಲ ಸೋರಿಕೆಯಾಗಿತ್ತು. ಇದು ದೊಡ್ಡಮಟ್ಟದ ವಿನಾಶ ಸೃಷ್ಟಿಸಿತ್ತು. 3 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸ್ಥಳೀಯರ ಮೇಲೆಲ್ಲ ದುಷ್ಪರಿಣಾಮ ಆಗಿತ್ತು. ಲಕ್ಷಾಂತರ ಜನರು ಅಸ್ವಸ್ಥರಾಗಿದ್ದರು/ಗಾಯಗೊಂಡಿದ್ದರು. 1989ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ಸಂತ್ರಸ್ತರಿಗೆ 470ಮಿಲಿಯನ್ ಡಾಲರ್ಗಳಷ್ಟು ಹಣ (3867 ಕೋಟಿ ರೂಪಾಯಿ)ವನ್ನು ಪರಿಹಾರವಾಗಿ ಪಾವತಿಸಲಾಗಿತ್ತು. ಆದರೆ ಮತ್ತಷ್ಟು ಹೆಚ್ಚುವರಿಯಾಗಿ 7,844 ಕೋಟಿ ರೂಪಾಯಿಯನ್ನು ಯೂನಿಯನ್ ಕಾರ್ಬೈಡ್ ಕಂಪನಿ ಕೊಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರಕ್ಕೆ ತೀವ್ರ ಹಿನ್ನಡೆಯಾಗಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ‘ಕಂಪನಿಯು ಈಗಾಗಲೇ ಪರಿಹಾರವನ್ನು ಕೊಟ್ಟಿದೆ. ಅದು ಮಾಡಿರುವ ಪಾವತಿಯನ್ನು ಸುಮ್ಮನೆ ಅಲ್ಲಗಳೆಯಲಾಗದು. ಏನಾದರೂ ವಂಚನೆಯಾಗಿದ್ದರೆ, ಅದರ ಆಧಾರದಲ್ಲಿ ಅರ್ಜಿ ಸಲ್ಲಿಸಿದಾಗಷ್ಟೇ ವಿಚಾರಣೆ ನಡೆಸಬಹುದು. ಆದರೆ ಕೇಂದ್ರ ಸರ್ಕಾರದ ಅರ್ಜಿಯಲ್ಲಿ ಎಲ್ಲಿಯೂ ಕಂಪನಿಯಿಂದ ವಂಚನೆ ಆದ ಬಗ್ಗೆ ಉಲ್ಲೇಖವಿಲ್ಲ. ಎರಡು ದಶಕಗಳಾದರೂ ಈ ವಿಚಾರಕ್ಕೆ ಪೂರಕವಾದ ತಾರ್ಕಿಕ ವಿವರಣೆಯನ್ನು ಕೇಂದ್ರ ಸರ್ಕಾರ ಕೊಡಲಿಲ್ಲ. ಹೀಗಾಗಿ ಕೋರ್ಟ್ ಅತೃಪ್ತಗೊಂಡಿದ್ದು, ಅರ್ಜಿಯನ್ನು ತಿರಸ್ಕರಿಸುತ್ತಿದ್ದೇವೆ’ ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ.
ಇದನ್ನೂ ಓದಿ: Nepal Plane Crash | ಮಗ ಹುಟ್ಟಿದನೆಂದು ಪಶುಪತಿನಾಥನಿಗೆ ಹರಕೆ ತೀರಿಸಲು ಹೋಗಿದ್ದವನು ವಿಮಾನ ಅಪಘಾತಕ್ಕೆ ಬಲಿ