ನವ ದೆಹಲಿ: ಗುಜರಾತ್ನಲ್ಲಿ ಅಭೂತಪೂರ್ವ ಗೆಲುವು ಪಡೆದ ಬಿಜೆಪಿ ಪಾಳಯದಲ್ಲಿ ಸರ್ಕಾರ ರಚನೆ ಸಂಬಂಧ ಚಟುವಟಿಕೆಗಳು ಗರಿಗೆದರಿವೆ. ಇಂದು ಗಾಂಧಿನಗರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಭೂಪೇಂದ್ರ ಪಟೇಲ್ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ಅವರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು, ಉಳಿದೆಲ್ಲ ಶಾಸಕರೂ ಸಮ್ಮತಿಸಿದರು. ಭೂಪೇಂದ್ರ ಪಟೇಲ್ ಅವರು ಡಿಸೆಂಬರ್ 12ರಂದು ಮಧ್ಯಾಹ್ನ ಗುಜರಾತ್ನ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಭೂಪೇಂದ್ರ ಪಟೇಲ್ ಅವರೇ ಗುಜರಾತ್ ಮುಂದಿನ ಮುಖ್ಯಮಂತ್ರಿ ಎಂಬುದು ಈಗಾಗಲೇ ನಿಶ್ಚಿತವಾದ ವಿಷಯ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದಕ್ಕೂ ಮೊದಲು ಅದಕ್ಕೆ ಪೂರಕವಾದ ಪ್ರಕ್ರಿಯೆಗಳು ನಡೆಯುತ್ತಿವೆ. ಅದರಂತೆ ಇಂದು ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮೊದಲು ಪಾರ್ಡೊ ಶಾಸಕ ಕಾನು ದೇಸಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ಹೆಸರನ್ನು ಪ್ರಸ್ತಾಪ ಮಾಡಿದರು. ಉಳಿದೆಲ್ಲ ಶಾಸಕರೂ ಅದನ್ನು ಅವಿರೋಧವಾಗಿ ಅನುಮೋದಿಸಿದರು. ಇಂದು ಗಾಂಧಿನಗರದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಅರ್ಜುನ್ ಮುಂಡಾ ಇತರರು ಇದ್ದರು.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ 156 ಕ್ಷೇತ್ರಗಳಲ್ಲಿ ಗೆದ್ದು, ವಿಜಯದ ನಗೆ ಬೀರಿದೆ. ಇದು ಗುಜರಾತ್ ಮಟ್ಟಿಗೇ ದಾಖಲೆ. 1985ರಲ್ಲಿ ಕಾಂಗ್ರೆಸ್ 149 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಅದಾದ ಮೇಲೆ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲೀ ಗುಜರಾತ್ನಲ್ಲಿ ಇಷ್ಟು ದೊಡ್ಡಮಟ್ಟದ ಗೆಲುವು ಸಾಧಿಸಿರಲಿಲ್ಲ. ಇಷ್ಟೆಲ್ಲ ಸಂಖ್ಯೆಯ ಕ್ಷೇತ್ರಗಳನ್ನು ಗೆದ್ದಿರಲಿಲ್ಲ. 2021ರ ಸೆಪ್ಟೆಂಬರ್ನಲ್ಲಿ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅಧಿಕಾರ ವಹಿಸಿಕೊಂಡರು. 2017ರಿಂದಲೂ ಅಹಮದಾಬಾದ್‌ನ ಘಾಟ್ಲೊಡಿಯಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವಲ್ಲಿ ನಿಸ್ಸೀಮರು. ಗುಜರಾತ್ನಲ್ಲೂ ಆಡಳಿತ ವಿರೋಧಿ ಅಲೆ ಹತ್ತಿಕ್ಕಿ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: Gujarat Election Result | ʼನರೇಂದ್ರʼನ ದಾಖಲೆ ಮುರಿದ ʼಭೂಪೇಂದ್ರʼ ಎಂದ ಮೋದಿ!, ಕಾರ್ಯಕರ್ತರಿಗೆ ಅಭಿನಂದನೆ