Site icon Vistara News

ರಾಹುಲ್ ಗಾಂಧಿಯಲ್ಲಿ ಬಿನ್​ ಲಾಡೆನ್​ನನ್ನು ಕಂಡ ಬಿಜೆಪಿ ನಾಯಕ; ಪ್ರಧಾನಿಯಾಗಲ್ಲ ಬಿಡಿ ಎಂದು ವ್ಯಂಗ್ಯ

Congress Leader Rahul Gandhi

#image_title

ಪಾಟ್ನಾ: ಮೊದಲೆಲ್ಲ ಗಡ್ಡವಿಲ್ಲದೆ, ಕ್ಲೀನ್​ ಶೇವ್​ ಲುಕ್​​ನಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಈಗ ಗಡ್ಡ ತೆಗೆಯುವುದಿಲ್ಲ. ಭಾರತ್​ ಜೋಡೋ ಯಾತ್ರೆ (Bharat Jodo yatra) ಮುಗಿಯುವಷ್ಟರಲ್ಲಂತೂ ಅವರ ಗಡ್ಡ ಆಕಾರ, ಆಕೃತಿ ಕಳೆದುಕೊಂಡಿತ್ತು. ಬಳಿಕ ಲಂಡನ್ ಪ್ರವಾಸದ ವೇಳೆ ರಾಹುಲ್ ಗಾಂಧಿ ಗಡ್ಡವನ್ನು ಟ್ರಿಮ್ ಮಾಡಿದ್ದರು. ಬರಬರುತ್ತ ರಾಹುಲ್ ಗಾಂಧಿಯ ಗಡ್ಡವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡು ಬಿಜೆಪಿಗರು ಅವರನ್ನು ಟೀಕಿಸಲು ಶುರು ಮಾಡಿದ್ದಾರೆ. ಇದೀಗ ಬಿಜೆಪಿ ಬಿಹಾರ ಘಟಕದ ಮುಖ್ಯಸ್ಥ ಸಾಮ್ರಾಟ್​ ಚೌಧರಿ ಅವರು ರಾಹುಲ್ ಗಾಂಧಿ ಗಡ್ಡವನ್ನು ಉಲ್ಲೇಖಿಸಿ, ಅವರನ್ನು ಅಲ್​ ಕೈದಾ ಉಗ್ರ ಸಂಘಟನೆ ಮುಖ್ಯಸ್ಥ, ಮೃತ ಒಸಮಾ ಬಿನ್ ಲಾಡೆನ್​ಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲ, ಗಡ್ಡಬಿಟ್ಟಾಕ್ಷಣ ದೇಶದ ಪ್ರಧಾನಮಂತ್ರಿ ಹುದ್ದೆ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರು ಇಂದು ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು, ‘ರಾಹುಲ್ ಗಾಂಧಿಯವರು ಒಸಮಾ ಬಿನ್ ಲಾಡೆನ್​ನಂತೆ ಗಡ್ಡ ಬೆಳೆಸಿದ್ದಾರೆ. ಗಡ್ಡ ಬಿಟ್ಟರೆ ತಾನೂ ಪ್ರಧಾನಿ ಮೋದಿಯವರಂತೆ ಆಗುತ್ತೇನೆ ಎಂದುಕೊಂಡಿದ್ದಾರೆ. ಗಡ್ಡ ಬಿಟ್ಟ ತಕ್ಷಣ ಪ್ರಧಾನಿ ಹುದ್ದೆ ಸಿಗುವುದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರು ಕೂಡ ರಾಹುಲ್ ಗಾಂಧಿ ಗಡ್ಡದ ಬಗ್ಗೆ ಟೀಕಿಸಿದ್ದರು. ರಾಹುಲ್ ಗಾಂಧಿಯವರನ್ನು, ಇರಾಕ್ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್​​ಗೆ ಹೋಲಿಸಿದ್ದರು.

ಇದನ್ನೂ ಓದಿ: ವಿಸ್ತಾರ TOP 10 NEWS: ಷರತ್ತಿನೊಂದಿಗೆ ಕಾಂಗ್ರೆಸ್‌ ಗ್ಯಾರಂಟಿ ಜಾರಿಯಿಂದ, ಅಮೆರಿಕದಲ್ಲಿ ಮತ್ತೆ ಜಾರಿದ ರಾಹುಲ್‌ ಗಾಂಧಿವರೆಗಿನ ಪ್ರಮುಖ ಸುದ್ದಿಗಳಿವು

ಇದೇ ವೇಳೆ ಸಾಮ್ರಾಟ್​ ಚೌಧರಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶದ ಉದ್ದಗಲಕ್ಕೂ ಪ್ರಯಾಣ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ತಾನೇ ಮುಂದಿನ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ. ನಿತೀಶ್​ ಕುಮಾರ್ ಪ್ರಧಾನಮಂತ್ರಿ ಹೌದಾ?, ಅವರು ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಂತೆ ಕಾಣುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

Exit mobile version