Site icon Vistara News

ದೊಡ್ಡಮಟ್ಟದ ಭದ್ರತಾ ಲೋಪ; ಪಾರಾಗಲು ಫುಟ್​ಪಾತ್​ ಮೇಲೆ ಜಂಪ್​ ಮಾಡಿದ ಮುಖ್ಯಮಂತ್ರಿ

Bihar Chief Minister Security breach By Biker

#image_title

ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ (Bihar Chief Minister Nitish Kumar) ಅವರ ಭದ್ರತೆಯಲ್ಲಿ ದೊಡ್ಡಮಟ್ಟದ ಲೋಪವಾಗಿದೆ. ಇಂದು ಮುಂಜಾನೆ ಅವರು ವಾಕಿಂಗ್​ ಹೋಗಿದ್ದಾಗ ಬೈಕ್​​ವೊಂದು ವೇಗವಾಗಿ ಬಂದು, ನಿತೀಶ್​ ಕುಮಾರ್​​ ಬೆಂಗಾವಲು ಸಿಬ್ಬಂದಿಯ ಮಧ್ಯೆಯೇ ನುಗ್ಗಿದೆ. ಪ್ರತಿದಿನ ವಾಕಿಂಗ್​ ಮಾಡುವ ಸಿಎಂ ನಿತೀಶ್​ ಕುಮಾರ್​ ಇಂದು ಮುಂಜಾನೆ ಕೂಡ ಎಂದಿನಂತೆ ತಮ್ಮ ಮನೆಯಿಂದ ಹೊರಟು, ಸರ್ಕ್ಯುಲರ್​ ರಸ್ತೆ ಮಾರ್ಗವಾಗಿ ಸರ್ಕ್ಯುಲರ್​ ಹೌಸಿಂಗ್​​ನತ್ತ ಹೊರಟಿದ್ದರು. ಅವರ ಸುತ್ತಲೂ ಭದ್ರತಾ ಸಿಬ್ಬಂದಿ ಇದ್ದರು. ಆದರೆ ಬೈಕ್​ವೊಂದು ವೇಗವಾಗಿ ಬಂದು, ಅವರ ಸೆಕ್ಯೂರಿಟಿ ಸಿಬ್ಬಂದಿಯನ್ನು ದಾಟಿದೆ. ಈ ಬೈಕ್​​ನಲ್ಲಿ ಇಬ್ಬರು ಇದ್ದರು. ಅವರಿಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ ‘ಸರ್ಕ್ಯೂಲರ್​ ರಸ್ತೆ ಬಳಿ ಬೆಳಗಿನ ವಾಕ್​ ಮಾಡುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೈಕ್​​ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇಬ್ಬರು ಯುವಕರಿದ್ದ ಬೈಕ್​ ಸಿಎಂ ಸೆಕ್ಯೂರಿಟಿ ಸಿಬ್ಬಂದಿಯ ಮಧ್ಯೆಯೇ ನುಗ್ಗಿ ಬಂತು. ತಮ್ಮನ್ನು ತಾವು ಅಪಾಯದಿಂದ ಪಾರು ಮಾಡಿಕೊಳ್ಳಲು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಾವು ನಡೆಯುತ್ತಿದ್ದ ರಸ್ತೆ ಬಿಟ್ಟು ಫೂಟ್​ಪಾತ್​ಗೆ ಜಿಗಿದಿದ್ದಾರೆ’ ಎಂದು ಹೇಳಿದ್ದಾರೆ. ಇನ್ನು ಸೀ ಸರ್ಕ್ಯುಲರ್​ ರಸ್ತೆಯಲ್ಲಿ ಸಿಎಂ ನಿತೀಶ್​ ಕುಮಾರ್ ನಿವಾಸ, ಮಾಜಿ ಸಿಎಂ ರಾಬ್ರಿ ದೇವಿ ಮನೆ ಸೇರಿ ಹಲವು ರಾಜಕಾರಣಿಗಳ ಮನೆಗಳು ಇವೆ.

ಇದನ್ನೂ ಓದಿ: Amit Shah: ನಿತೀಶ್‌ ಕುಮಾರ್‌ಗೆ ಬಿಜೆಪಿ ಬಾಗಿಲು ಶಾಶ್ವತವಾಗಿ ಮುಚ್ಚಿದೆ, ಬಿಹಾರದಲ್ಲಿ ಅಮಿತ್‌ ಶಾ ಘೋಷಣೆ

ಮುಖ್ಯಮಂತ್ರಿ ಜತೆ ಭದ್ರತೆಗಾಗಿ ವಿಶೇಷ ಭದ್ರತಾ ಗ್ರೂಪ್​ (SSG), ಪಾಟ್ನಾ ಪೊಲೀಸರು ಇದ್ದರು. ಇವರು ಕೂಡಲೇ ಬೈಕರ್​ನನ್ನು ಹಿಡಿದಿದ್ದಾರೆ. ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಬೆನ್ನಲ್ಲೇ ಎಸ್​ಎಸ್​ಜಿ ಕಮಾಂಡಂಟ್​ ಹರಿ ಮೋಹನ್​ ಶುಕ್ಲಾ ಮತ್ತು ಪಾಟ್ನಾ ಎಸ್​ಎಸ್​ಪಿ ರಾಜೀವ್ ಮಿಶ್ರಾರಿಗೆ ಸಮನ್ಸ್​ ನೀಡಿ, ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಸ್ಥಳೀಯ ಸಿಸಿಟಿವಿ ಫೂಟೇಜ್​​ಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ.

ನಿತೀಶ್​ ಕುಮಾರ್ ಅವರಿಗೆ 2018ರಲ್ಲಿ ಜಡ್ ಪ್ಲಸ್​ ಭದ್ರತೆ ಕೊಡಲಾಗಿದೆ. ಪ್ರಧಾನಿ ಮೋದಿ ಸುತ್ತ ಹೇಗೆ ಎಸ್​ಪಿಜಿ ಕಮಾಂಡೋಗಳು ಸುತ್ತುವರಿದಿರುತ್ತಾರೋ, ಅದೇ ಮಾದರಿಯಲ್ಲಿ ಎಸ್​ಎಸ್​ಜಿ ಕಮಾಂಡೋಗಳು ನಿತೀಶ್​ ಕುಮಾರ್ ಸುತ್ತಲೂ ಇರುತ್ತಾರೆ. ಇವರ ಹೊರತಾಗಿ ಬಿಹಾರ ಮಿಲಿಟರಿ ಪೊಲೀಸ್, ಸ್ಥಳೀಯ ಪೊಲೀಸರೂ ಭದ್ರತೆಗೆ ನಿಯೋಜನೆಗೊಂಡಿರುತ್ತಾರೆ. ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಏನಿಲ್ಲವೆಂದರೂ 50 ಭದ್ರತಾ ಪಡೆ ಸಿಬ್ಬಂದಿ ಇದ್ದೇ ಇರುತ್ತಾರೆ.

Exit mobile version