ಬಿಹಾರ ಉಪಮುಖ್ಯಮಂತ್ರಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav)ಗೆ ಮಗಳು ಹುಟ್ಟಿದ್ದಾಳೆ. ಇಂದು ಮುಂಜಾನೆ ಅವರ ಪತ್ನಿ ರಾಜೇಶ್ವರಿ ಯಾದವ್ಗೆ ಹೆರಿಗೆಯಾಗಿದೆ. ಇದು ಅವರ ಮೊದಲ ಮಗುವಾಗಿದ್ದು, ಲಾಲೂ ಪ್ರಸಾದ್ ಯಾದವ್ ಅವರ ಇಡೀ ಕುಟುಂಬ ಸಖತ್ ಖುಷಿಯಾಗಿದೆ. ತೇಜಸ್ವಿ ಯಾದವ್ ತಾವು ತಮ್ಮ ಪುಟಾಣಿ ಮಗಳನ್ನು ಎತ್ತಿಕೊಂಡಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಇದು ನನಗಾಗಿ ದೇವರು ಕಳಿಸಿದ ಉಡುಗೊರೆ’ ಎಂದಿದ್ದಾರೆ. ಮಗುವಿನ ಮುಖವನ್ನೇ ನೋಡುತ್ತಿರುವ ಅವರು ಸ್ವಲ್ಪ ಭಾವುಕರಾದಂತೆ ತೋರುತ್ತಾರೆ. ಅದೇ ಫೋಟೋವನ್ನು ಅವರ ಸಹೋದರಿ ರೋಹಿಣಿ ಆಚಾರ್ಯ ಅವರೂ ಶೇರ್ ಮಾಡಿಕೊಂಡು ‘ಪುಟ್ಟ ದೇವತೆ’ ಬಂದಿದ್ದಾಳೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ತೇಜಸ್ವಿ ಯಾದವ್ ಅವರು ತಮ್ಮ ಬಹುಕಾಲದ ಗೆಳತಿ ರಾಚೆಲ್ ಗಾಡಿನ್ಹೋ (ಮದುವೆ ಬಳಿಕ ರಾಜಶ್ರೀ ಯಾದವ್ ಆಗಿದ್ದಾರೆ) ಅವರನ್ನು 2021ರ ಡಿಸೆಂಬರ್ 9ರಂದು ಮದುವೆಯಾಗಿದ್ದರು. ರಾಚೆಲ್ ಅವರು ಮೂಲತಃ ಹರ್ಯಾಣದವರಾಗಿದ್ದು, ಬಾಲ್ಯದಿಂದಲೂ ದೆಹಲಿಯಲ್ಲಿಯೇ ವಾಸವಾಗಿದ್ದರು. ದೆಹಲಿಯ ಆರ್ಕೆ ಪುರಂನಲ್ಲಿರುವ ಡಿಪಿಎಸ್ ಶಾಲೆಯಲ್ಲಿ ತೇಜಸ್ವಿ ಮತ್ತು ರಾಚೆಲ್ ಒಟ್ಟಿಗೇ ಓದಿದ್ದರು. ಆಗನಿಂದಲೂ ಸ್ನೇಹಿತರಾಗಿದ್ದ ಅವರು ಬಳಿಕ ತಮ್ಮ ಸ್ನೇಹಕ್ಕೆ ಪ್ರೀತಿಯ ಮುದ್ರೆ ಒತ್ತಿದ್ದರು. ಸುಮಾರು 7 ವರ್ಷ ಪ್ರೀತಿಸಿ 2021ರಲ್ಲಿ ಮದುವೆಯಾಗಿದ್ದರು.
ಸದ್ಯ ತೇಜಸ್ವಿ ಯಾದವ್ ಕುಟುಂಬ ‘ಉದ್ಯೋಗಕ್ಕಾಗಿ ಜಮೀನು ಹಗರಣ’ಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಎದುರಿಸುತ್ತಿದೆ. 2004ರಿಂದ 2009ರವರೆಗೆ ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದಾಗ ಬಿಹಾರದಲ್ಲಿ ಅನೇಕರಿಂದ ಅವರ ಜಮೀನು/ಭೂಮಿಯನ್ನು ಪಡೆದು, ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ಉದ್ಯೋಗ ಕೊಟ್ಟಿದ್ದಾರೆ. ಇದರಲ್ಲಿ ಕೋಟ್ಯಂತರ ರೂಪಾಯಿ ಹಗರಣವಾಗಿದೆ ಎಂಬ ಆರೋಪದಡಿ ಬಹುವರ್ಷಗಳಿಂದಲೂ ತನಿಖೆ ನಡೆಯುತ್ತಿದೆ. ಈಗ ಮತ್ತೆ ಸಿಬಿಐ ಮತ್ತು ಇಡಿ ತನಿಖಾ ದಳಗಳು ಲಾಲು ಕುಟುಂಬದ ವಿಚಾರಣೆ ನಡೆಸುತ್ತಿವೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾರದ ಹಿಂದೆ ತೇಜಸ್ವಿ ಯಾದವ್ ಮನೆಯಲ್ಲಿ ಇಡಿ ಶೋಧ ನಡೆಸಿತ್ತು. ಆಗ 6ಕೋಟಿ ರೂಪಾಯಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದ್ದಾಗಿ ಕೂಡ ವರದಿಯಾಗಿದೆ.