ನವ ದೆಹಲಿ: ಭಾರತಕ್ಕೆ ಬಂದು ಹೋದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ (Bilawal Bhutto Zardari) ವಿರುದ್ಧ ಭಾರತದ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್ (S Jaishankar) ಅವರು ವಾಗ್ದಾಳಿ ನಡೆಸಿದ್ದಾರೆ. ಗೋವಾದಲ್ಲಿ ಮೇ 5ರಂದು ನಡೆದಿದ್ದ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಪಾಲ್ಗೊಂಡ ಭುಟ್ಟೊ ಪಾಕಿಸ್ತಾನಕ್ಕೆ ತೆರಳಿದ ಬಳಿಕ ಇತ್ತ ಸುದ್ದಿಗೋಷ್ಠಿ ನಡೆಸಿದ ಎಸ್.ಜೈಂಶಕರ್ ‘ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಭಯೋತ್ಪಾದನಾ ಕಾರ್ಖಾನೆಯೊಂದರ ಪ್ರಚಾರಕ, ಸಮರ್ಥಕ ಮತ್ತು ವಕ್ತಾರನಾಗಿ ಇಲ್ಲಿಗೆ ಬಂದಿದ್ದರು’ ಎಂದು ಹೇಳಿದ್ದಾರೆ.
‘ಶಾಂಘೈ ಸಹಕಾರ ಸಂಸ್ಥೆ ಸದಸ್ಯ ರಾಷ್ಟ್ರದಿಂದ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವರನ್ನು ಶಿಷ್ಟಾಚಾರದಂತೆ, ಎಲ್ಲ ರೀತಿಯಿಂದಲೂ ಸರಿಯಾಗಿಯೇ ನಡೆಸಿಕೊಳ್ಳಲಾಗಿದೆ. ಎಸ್ಸಿಒ ಸಭೆಯಲ್ಲಿ ಅವರ ನಿಲುವುಗಳನ್ನೂ ಕೇಳಲಾಗಿದೆ. ಅವರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯನ್ನೂ ನೀಡಲಾಗಿದೆ’ ಎಂದು ಹೇಳಿದ ಎಸ್.ಜೈಶಂಕರ್ ‘ಪಾಕಿಸ್ತಾನ ಸಚಿವರ ಭಾರತ ಭೇಟಿ ರಾಜತಾಂತ್ರಿಕವಾಗಿ ಯಾವುದೇ ಪ್ರಾಮುಖ್ಯತೆ ಪಡೆದಿಲ್ಲ. ಶಾಂಘೈ ಸಹಕಾರ ಒಕ್ಕೂಟದ ಸಭೆಗಷ್ಟೇ ಸೀಮಿತವಾಗಿದೆ. ಹೀಗಾಗಿ ಭಾರತದ ಜನರು ಈ ಬಗ್ಗೆ ತುಂಬ ಮಹತ್ವ ಕೊಡುವುದು ಬೇಡ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ಗೋವಾ ಭೇಟಿ: 600 ಭಾರತೀಯ ಮೀನುಗಾರರಿಗೆ ಸಿಕ್ತು ಗುಡ್ನ್ಯೂಸ್!
ಶಾಂಘೈ ಸಹಕಾರ ಸಂಸ್ಥೆಯ ಪ್ರಸಕ್ತ ಸಾಲಿನ ಶೃಂಗದ ಆತಿಥ್ಯವನ್ನು ಭಾರತ ವಹಿಸಿದೆ. ಹೀಗಾಗಿ ಅದರ ಪೂರ್ವಭಾವಿ ಸಭೆಗಳನ್ನು ಆಯೋಜಿಸುತ್ತಿದೆ. ಶಾಂಘೈ ಒಕ್ಕೂಟದಲ್ಲಿ ಭಾರತ, ಚೀನಾ, ತಜಿಕಿಸ್ತಾನ್, ರಷ್ಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ ದೇಶಗಳು ಇವೆ. ಹೀಗಾಗಿ ಶಾಂಘೈ ಸಂಬಂಧಪಟ್ಟು ಏನೇ ಸಭೆಗಳನ್ನು ಮಾಡುವುದಾದರೂ ಇವಿಷ್ಟೂ ದೇಶಗಳ ಪ್ರತಿನಿಧಿಗಳೂ ಇರಲೇಬೇಕು. ಈ ಬಾರಿ ಶೃಂಗಸಭೆಯ ಆತಿಥ್ಯ ವಹಿಸಿರುವ ಭಾರತ ಉಳಿದ ದೇಶಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಿತ್ತು. ಭಾರತಕ್ಕೆ ಬಂದ ಭುಟ್ಟೊಗೆ ನಮ್ಮ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರು ಹಸ್ತಲಾಘವ ಮಾಡಲಿಲ್ಲ. ಬದಲಾಗಿ ನಮಸ್ತೆ ಎಂದು ಬರಮಾಡಿಕೊಂಡರು. ಇನ್ನು ಇವರಿಬ್ಬರ ಮಧ್ಯೆ ಯಾವುದೇ ದ್ವಿಪಕ್ಷೀಯ ಮಾತುಕತೆಯೂ ನಡೆಯಲಿಲ್ಲ. ಕಾಶ್ಮೀರದಲ್ಲಿ ತೆಗೆದುಹಾಕಲಾಗಿರುವ ಆರ್ಟಿಕಲ್ 370 ಬಗ್ಗೆ ಭಾರತ ಮರುಪರಿಶೀಲನೆ ಮಾಡಬೇಕು. ಅಲ್ಲಿಯವರೆಗೂ ಈ ದೇಶದೊಂದಿಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಿಲ್ಲ ಎಂದು ಭುಟ್ಟೊ ಅವರು ಇಂಡಿಯಾ ಟುಡೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.