Site icon Vistara News

Bilkis Bano Case | ಅತ್ಯಾಚಾರ ಆರೋಪಿಗಳೆಲ್ಲ ಬ್ರಾಹ್ಮಣರು, ಒಳ್ಳೇ ಸಂಸ್ಕಾರವಿದೆ ಎಂದ ಬಿಜೆಪಿ ಶಾಸಕ !

Bilkis Bano Case rapists are Brahmins Says BJP MLA

ನವ ದೆಹಲಿ: ಬಿಲ್ಕಿಸ್​ ಬಾನೊ ಅತ್ಯಾಚಾರ ಕೇಸ್ (Bilkis Bano Case)​​ನ 11 ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ಬೆನ್ನಲ್ಲೇ ದೇಶಾದ್ಯಂತ ಅನೇಕರು ಅದನ್ನು ವಿರೋಧಿಸಿದ್ದಾರೆ. ಜೀವಾವಧಿ ಶಿಕ್ಷೆ ಪಡೆದಿದ್ದ ಅತ್ಯಾಚಾರಿಗಳಿಗೆ ಕ್ಷಮಾದಾನ ಕೊಟ್ಟಿರುವ ಗುಜರಾತ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಈ ಮಧ್ಯೆ ಗುಜರಾತ್​​ನ ಶಾಸಕ ಸಿ.ಕೆ.ರೌಲ್ಜಿ ಹೇಳಿಕೆಯೊಂದನ್ನು ನೀಡಿ ‘ಬಿಲ್ಕಿಸ್ ಬಾನೊ ಕೇಸ್​​ನಲ್ಲಿ ಆರೋಪಿಗಳಾಗಿದ್ದವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು, ಒಳ್ಳೆಯ ಸಂಸ್ಕಾರ ಹೊಂದಿರುವವರು. ಯಾರೋ ಕೆಟ್ಟ ಉದ್ದೇಶದಿಂದ ಅವರನ್ನು ಶಿಕ್ಷಿಸಿರಬಹುದು’ ಎಂದು ಹೇಳಿದ್ದಾರೆ

ಈ 11 ಆರೋಪಿಗಳನ್ನು ಸ್ವಾತಂತ್ರ್ಯೋತ್ಸವದ ದಿನ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇವರಿಗೆಲ್ಲ ಕ್ಷಮಾದಾನ ನೀಡುವ ವಿಚಾರವನ್ನು ಸಮಗ್ರವಾಗಿ ಪರಿಶೀಲನೆ ಮಾಡುವ ದೃಷ್ಟಿಯಿಂದ ಒಂದು ಪುನರವಲೋಕನ ಸಮಿತಿ ರಚನೆ ಮಾಡಲಾಗಿತ್ತು. ಅದರಲ್ಲಿದ್ದ ಇಬ್ಬರು ಬಿಜೆಪಿ ನಾಯಕರಲ್ಲಿ ಸಿ.ಕೆ.ರೌಲ್ಜಿ ಕೂಡ ಒಬ್ಬರು. 2002ರ ಗುಜರಾತ್​ ಗಲಭೆ ಸಮಯದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್​ ಬಾನೊ ತನ್ನ ಪುಟ್ಟ ಮಗಳು ಮತ್ತು ಕುಟುಂಬದವರೊಂದಿಗೆ ಊರು ಬಿಟ್ಟು ಪರಾರಿಯಾಗುತ್ತಿದ್ದಾಗ ಸುಮಾರು 19-20 ಜನರ ಅವರ ಮೇಲೆ ಅಟ್ಯಾಕ್​ ಮಾಡಿದ್ದರು. ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೆ, ಅವಳ ಕುಟುಂಬದ ಏಳು ಜನರನ್ನು ಹತ್ಯೆ ಮಾಡಿದ್ದರು. 2004ರಲ್ಲಿ ಆರೋಪಿಗಳನ್ನೆಲ್ಲ ಬಂಧಿಸಲಾಗಿತ್ತು. 2008ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಏಳು ಮಂದಿಯನ್ನು ಖುಲಾಸೆಗೊಳಿಸಿತ್ತು ಮತ್ತು 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಒಬ್ಬಾತ ವಿಚಾರಣೆಯ ವೇಳೆಯೇ ಮೃತಪಟ್ಟಿದ್ದ.

ಬಿಲ್ಕೀಸ್ ಬಾನೋ ಅತ್ಯಾಚಾರ ಆರೋಪಿಗಳ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್​​ನ ರಾಹುಲ್​ ಗಾಂಧಿ, ಅಸಾದುದ್ದೀನ್​ ಓವೈಸಿ ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿ, ಗುಜರಾತ್​ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ‘ಅವರೇನು ನಿಜವಾಗಿಯೂ ಅಪರಾಧ ಮಾಡಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವರಿಗೆ ಕ್ರೈಂ ಮಾಡುವ ಉದ್ದೇಶ ಇರಲಿಲ್ಲ’ ಎಂದು ರೌಲ್ಜಿ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಅವರೆಲ್ಲ ಒಳ್ಳೆಯ ಜನ, ಬ್ರಾಹ್ಮಣರು. ಬ್ರಾಹ್ಮಣರಿಗೆ ಒಳ್ಳೆಯ ಸಂಸ್ಕಾರ ಇರುತ್ತದೆ. ಇವರೂ ಸಹ ಜೈಲಿನಲ್ಲಿ ಅತ್ಯಂತ ಒಳ್ಳೆಯ ರೀತಿ ವರ್ತನೆ ಮಾಡಿದ್ದಾರೆ’ ಎಂದೂ ತಿಳಿಸಿದ್ದಾರೆ.

ಬಿಜೆಪಿ ಶಾಸಕನ ಸಂದರ್ಶನದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ನಾಯಕ ವೈ.ಸತೀಶ್​ ರೆಡ್ಡಿ ಶೇರ್ ಮಾಡಿಕೊಂಡು, ‘ಅತ್ಯಾಚಾರ ಆರೋಪಿಗಳಿಗೆ ಸಂಸ್ಕಾರ ಇದೆ ಎಂದು ಬಿಜೆಪಿ ಹೇಳುತ್ತಿದೆ. ಈ ಪಕ್ಷ ಇದಕ್ಕಿಂತಲೂ ಹೆಚ್ಚಿನ ಕೀಳುಮಟ್ಟಕ್ಕೆ ಇಳಿಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Bilkis Bano Case | ಹೆಣ್ಣುಮಕ್ಕಳಿಗೆ ನಿಮ್ಮ ಸಂದೇಶವೇನು, ಮೋದಿಗೆ ರಾಹುಲ್‌ ಪ್ರಶ್ನೆ

Exit mobile version