Site icon Vistara News

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಭಾರತವನ್ನು ಹೊಗಳಿದ ಬಿಲ್​ ಗೇಟ್ಸ್​; ಅಭೂತಪೂರ್ವ ಪ್ರಗತಿ ಎಂದು ಶ್ಲಾಘನೆ

Bill Gates praises India After meets PM Modi

#image_title

ನವ ದೆಹಲಿ: ಭಾರತಕ್ಕೆ ಆಗಮಿಸಿದ್ದ ಮೈಕ್ರೋಸಾಫ್ಟ್​ ಸಹಸಂಸ್ಥಾಪಕ ಬಿಲ್​ ಗೇಟ್ಸ್​ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಭಾರತದ ಅಭೂತಪೂರ್ವ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಭಾರತದ ನೂತನ ಆವಿಷ್ಕಾರಗಳು ಇಡೀ ಜಗತ್ತಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ಉಲ್ಲೇಖಿಸಿ ಅವರು ಈ ಮಾತುಗಳನ್ನಾಡಿದ್ದಾರೆ.

ಪ್ರಧಾನಿ ಭೇಟಿ ನಂತರ ಬಿಲ್​ ಗೇಟ್ಸ್​ ಅವರು ತಮ್ಮ ಗೇಟ್ಸ್​ನೋಟ್ಸ್​ ಬ್ಲಾಗ್​ನಲ್ಲಿ ಕೂಡ ಭಾರತವನ್ನು ಹೊಗಳಿ ಬರೆದಿದ್ದಾರೆ. ಆರೋಗ್ಯ, ಹವಾಮಾನ ಸೇರಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸ ಕಲ್ಪನೆಗಳಿಗೆ ತೆರೆದುಕೊಂಡು, ಆವಿಷ್ಕಾರಕ್ಕೆ ಒಡ್ಡಿಕೊಂಡು ಹೂಡಿಕೆ ಮಾಡಿದಾಗ ಏನು ಸಾಧನೆ ಮಾಡಬಹುದು ಎಂಬುದನ್ನು ಭಾರತ ತೋರಿಸಿದೆ. ಕೊವಿಡ್​ 19 ಸಾಂಕ್ರಾಮಿಕದ ನಂತರ ನಾನು ಭಾರತಕ್ಕೆ ಭೇಟಿಕೊಟ್ಟೆ. ಈ ಭೇಟಿ ತುಂಬ ಸ್ಫೂರ್ತಿದಾಯಕವಾಗಿತ್ತು. ಹವಾಮಾನ ಬದಲಾವಣೆ, ಭಾರತದ ಆರೋಗ್ಯ ವ್ಯವಸ್ಥೆ, ಕೊವಿಡ್​ 19 ಲಸಿಕೆ ತಯಾರಿಕೆಯಲ್ಲಿ ಭಾರತದ ಮುಂದಾಳತ್ವ, ಗತಿ ಶಕ್ತಿ (ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ) ಯೋಜನೆ ಬಗ್ಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚೆ ನಡೆಸಿದೆ ಎಂದು ಬಿಲ್​ ಗೇಟ್ಸ್​ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ಕೊವಿಡ್​ 19 ಲಸಿಕೆ ಅಭಿವೃದ್ಧಿ ಪಡಿಸಿ ಜಗತ್ತಿನಾದ್ಯಂತ ಕೋಟ್ಯಂತರ ಜನರ ಜೀವ ಕಾಪಾಡಿದೆ. ಈ ಲಸಿಕೆಯನ್ನು ಜನರಿಗೆ ಒದಗಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕೊವಿನ್​ ಪೋರ್ಟಲ್​ ಅಭಿವೃದ್ಧಿಪಡಿಸಿದ್ದೂ ಕೂಡ ಶ್ಲಾಘನೀಯ. ಈ ಕೊವಿನ್​ (Co-Win)ಪೋರ್ಟಲ್​​ಗಳನ್ನು ಜಾಗತಿಕವಾಗಿ ಅಳವಡಿಸಿಕೊಳ್ಳಬೇಕು ಎಂದು ಬಿಲ್​ ಗೇಟ್ಸ್ ಹೇಳಿದ್ದಾರೆ. ಹಾಗೇ, ಪ್ರಸಕ್ತ ಸಾಲಿನ ಜಿ20 ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದನ್ನೂ ಬ್ಲಾಗ್​ನಲ್ಲಿ ಪ್ರಸ್ತಾಪಿಸಿದ ಅವರು ‘ಭಾರತ ತನ್ನ ನಾವೀನ್ಯತೆ, ಹೊಸ ಕಲ್ಪನೆಗಳನ್ನು ಜಗತ್ತಿಗೇ ಪಸರಿಸಲು ಈ ಜಿ20 ಶೃಂಗ ಒಂದು ಅದ್ಭುತ ಅವಕಾಶವಾಗಲಿದೆ ಎಂದರು. ಭಾರತದ ಡಿಜಿಟಲ್​ ಐಡಿ (ಆಧಾರ್ ಕಾರ್ಡ್​_, ಪಾವತಿ ವ್ಯವಸ್ಥೆಯನ್ನು ಮೆಚ್ಚಿಕೊಂಡ ಅವರು, ಈ ಪರಿಕಲ್ಪನೆಯನ್ನು ಪಸರಿಸುವಲ್ಲಿ ಭಾರತದ ಕೇಂದ್ರ ಸರ್ಕಾರಕ್ಕೆ ಗೇಟ್ಸ್​ ಫೌಂಡೇಶನ್​ ಸಹಕಾರ ನೀಡಲಿದೆ’ ಎಂದು ಹೇಳಿದರು.

ಇದನ್ನೂ ಓದಿ: Viral Video: ಕಿಚಡಿಗೆ ಒಗ್ಗರಣೆ ಹಾಕುವುದು ಹೇಗೆಂದು ಬಿಲ್​ ಗೇಟ್ಸ್​​​ಗೆ ಕಲಿಸಿಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ!

‘ಕ್ಷಯರೋಗ, ಕಾಲರಾ ಮತ್ತು ಇತರ ರೋಗಗಳ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಉಪಕ್ರಮಗಳನ್ನು ಬಿಲ್​ ಗೇಟ್ಸ್​ ಹೊಗಳಿದರು. ಹಾಗೇ, ಕೊರೊನಾ ಸಾಂಕ್ರಾಮಿಕದ ವೇಳೆಯಲ್ಲೂ ಶಿಕ್ಷಣ ನಿಲ್ಲಬಾರದು ಎಂಬ ಕಾರಣಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿಗೊಳಿಸಿದ್ದರ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಹವಮಾನ ವೈಪರೀತ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಸರ್ಕಾರದ ಜತೆ ನಮ್ಮ ಫೌಂಡೇಶನ್​ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.

Exit mobile version