ದೆಹಲಿ ಮಹಾನಗರ ಪಾಲಿಕೆ (Delhi MCD)ಮೇಯರ್ ಆಯ್ಕೆ ಚುನಾವಣೆ ಫೆ.22ರಂದು ನಡೆದು, ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಅವರು 150 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ. ಡಿಸೆಂಬರ್ನಲ್ಲಿಯೇ ಮಹಾನಗರ ಪಾಲಿಕೆ ಚುನಾವಣೆ ಮುಗಿದಿದ್ದರೂ, ಮೇಯರ್ ಆಯ್ಕೆ ಆಗಿರಲಿಲ್ಲ. ನಾಮನಿರ್ದೇಶನಗೊಂಡ ಸದಸ್ಯರಿಗೂ ಮತದಾನದ ಹಕ್ಕನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕೊಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು. ಈ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮೇಯರ್ ಆಯ್ಕೆ ಚುನಾವಣೆ ನಡೆಯಿತು.
ಆದರೆ ದೆಹಲಿ ಮಹಾನಗರ ಪಾಲಿಕೆಯಲ್ಲಿ ಇಂದು (ಫೆ.23) ಮುಂಜಾನೆ ಮತ್ತೆ ಬಿಜೆಪಿ-ಆಪ್ ಕೌನ್ಸಿಲರ್ಗಳು ಕಿತ್ತಾಡಿಕೊಂಡಿದ್ದಾರೆ. ದೊಡ್ಡದಾಗಿ ಘೋಷಣೆ ಕೂಗುತ್ತ, ಪರಸ್ಪರ ಆರೋಪಗಳನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬ್ಯಾಲೆಟ್ ಬಾಕ್ಸ್ಗಳನ್ನೆಲ್ಲ ಪಾಲಿಕೆಯ ಸದನ ಬಾವಿಗೆ ಎಸೆದಿದ್ದಾರೆ. ಇಬ್ಬರು ಮಹಿಳಾ ಕೌನ್ಸಿಲರ್ಗಳಂತೂ ಗುದ್ದಾಡಿಕೊಂಡು, ತಳ್ಳಾಡಿಕೊಂಡ ಘಟನೆಯೂ ನಡೆದಿದೆ. ಹೀಗಾಗಿ ಸಭೆಯನ್ನು ಮತ್ತೆ ಮುಂದೂಡಲಾಗಿದೆ.
ಫೆ.22ರಂದು ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದ ಬೆನ್ನಲ್ಲೇ ಇಂದು ಮುಂಜಾನೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಗುಟ್ಟಾಗಿ ಮತ ಹಾಕುವಾಗ ಆಪ್ ಕೌನ್ಸಿಲರ್ಗಳು ಬಂದು ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಾರೆ. ಇದು ರಹಸ್ಯ ಮತದಾನದ ನಿಯಮಗಳ ಉಲ್ಲಂಘನೆ, ಹೀಗಾಗಿ ಈಗಾಗಲೇ ಹಾಕಲಾದ ಮತಗಳನ್ನು ರದ್ದು ಮಾಡಬೇಕು, ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಬಿಜೆಪಿ ಕೌನ್ಸಿಲರ್ಗಳು ಆಗ್ರಹಿಸಿ, ದೊಡ್ಡದಾಗಿ ಗಲಾಟೆ ಶುರು ಮಾಡಿದರು. ಇದೇ ಆಪ್ ಮತ್ತು ಬಿಜೆಪಿ ನಡುವಿನ ಹೊಡೆದಾಟಕ್ಕೂ ಕಾರಣವಾಯಿತು. ಬಳಿಕ ಸಭೆಯನ್ನು ಮುಂದೂಡಲಾಯಿತು.
ಇದನ್ನೂ ಓದಿ: Delhi Mayor Shelly Oberoi: ಯಾರು ಈ ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್? ರಾಜಕೀಯಕ್ಕೆ ಬರುವ ಮುಂಚೆ ಏನಾಗಿದ್ದರು?
ಬಿಜೆಪಿ ವಿರುದ್ಧ ಕಟು ಶಬ್ದಗಳಿಂದ ಆರೋಪ ಮಾಡಿದ ಆಪ್ ಲೀಡರ್ ಸೌರಭ್ ಭಾರದ್ವಾಜ್ ‘ಮೇಯರ್ ಚುನಾವಣೆಗೆ ಅಡ್ಡಿಪಡಿಸುವ ಪ್ರಯತ್ನ ಫಲಿಸಲಿಲ್ಲ. ಈಗ ಬಿಜೆಪಿಯವರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ದಿನದ ಮೊದಲ ಬೈಠೆಕ್ನಲ್ಲಿಯೇ ಎಲ್ಲ ಚುನಾವಣೆಯೂ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಸ್ಥಾಯಿ ಸಮಿತಿಗೆ ಕೂಡ ಇಂದೇ ಚುನಾವಣೆ ನಡೆಯುತ್ತದೆ. ಬೆಳಗ್ಗೆಯಾಗದೆ ಇದ್ದರೆ, ಸಂಜೆ ನಡೆಸುತ್ತೇವೆ’ ಎಂದು ಹೇಳಿದ್ದಾರೆ.