Site icon Vistara News

BJP Reshuffle: 4 ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ; ಕರ್ನಾಟಕಕ್ಕೆ ಯಾರು?

G. Kishan Reddy daggubati purandeswari Sunil Kumar Jakhar babulal marandi

2024ರ ಲೋಕಸಭೆ ಚುನಾವಣೆ (2024 Lok Sabha Election)ಗೆ ಇನ್ನೊಂದು ವರ್ಷವೂ ಇಲ್ಲ. ರಾಜಕೀಯ ವಲಯದಲ್ಲಿ, ರಾಷ್ಟ್ರೀಯ ಪಕ್ಷಗಳು-ಪ್ರಾದೇಶಿಕ ಪಕ್ಷಗಳಲ್ಲಿ ‘ಚುನಾವಣಾ ಚಟುವಟಿಕೆಗಳು’ ಪ್ರಾರಂಭವಾಗಿವೆ. ಇದೀಗ ಬಿಜೆಪಿ (Bharatiya Janata Party) ನಾಲ್ಕು ರಾಜ್ಯಗಳ ಬಿಜೆಪಿ ಮುಖ್ಯಸ್ಥರನ್ನು (BJP State Presidents) ಬದಲಿಸಿದೆ. ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳನ್ನು (BJP Reshuffle) ಮಾಡಲಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆ ಮುಗಿದು, ಫಲಿತಾಂಶ ಹೊರಬಿದ್ದು, ಕಾಂಗ್ರೆಸ್​ ಸರ್ಕಾರ ರಚನೆಯಾಗಿದೆ. ಆದರೆ ಇಲ್ಲಿ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆ ನಡೆದಿಲ್ಲ. ರಾಜ್ಯಾಧ್ಯಕ್ಷರನ್ನು ಬದಲಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈಗಿರುವ ನಳಿನ್​ ಕುಮಾರ್ ಕಟೀಲ್​ ರಾಜೀನಾಮೆ ಕೊಟ್ಟರೆ, ಮುಂದಿನ ರಾಜ್ಯಾಧ್ಯಕ್ಷ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲೇ ಅತಿಹೆಚ್ಚು ಸ್ಥಾನಗಳನ್ನು ತಂದುಕೊಡುವ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆಗಳೆಲ್ಲ ಖಾಲಿ ಇರುವಾಗಲೇ, ಇಲ್ಲಿ ವ್ಯವಸ್ಥೆ ಸರಿಪಡಿಸುವ ಮೊದಲೇ, ಅತ್ತ ಪಂಜಾಬ್​, ತೆಲಂಗಾಣ, ಜಾರ್ಖಂಡ, ಆಂಧ್ರಪ್ರದೇಶ ರಾಜ್ಯಗಳಿಗೆ ಬಿಜೆಪಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ.

ಕೇಂದ್ರ ಸಚಿವರಾಗಿರುವ ಜಿ.ಕಿಶನ್ ರೆಡ್ಡಿ ಅವರನ್ನು ತೆಲಂಗಾಣ ರಾಜ್ಯ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇಷ್ಟು ದಿನ ಅಲ್ಲಿ ಬಂಡಿ ಸಂಜಯ್ ಕುಮಾರ್ ಇದ್ದರು. ಬಂಡಿ ಸಂಜಯ್ ಕುಮಾರ್ ಇತ್ತೀಚೆಗೆ ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದರು. ಹಾಗೇ, ಬಿಜೆಪಿ ಶಾಸಕ ಎಟೆಲಾ ರಾಜೇಂದರ್​ ಅವರನ್ನು ತೆಲಂಗಾಣ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಎಟೆಲಾ ರಾಜೇಂದರ್​ ಅವರು ಈ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಈಗಿನ ಭಾರತ್​ ರಾಷ್ಟ್ರ ಸಮಿತಿ ಪಕ್ಷದಲ್ಲಿ ಇದ್ದವರು. 2021ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಸೋಮು ವೀರರಾಜು ಅವರು ಇಷ್ಟು ದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದ್ದರು. ಆದರೆ ಅವರನ್ನೀಗ ಹುದ್ದೆಯಿಂದ ಕೆಳಗೆ ಇಳಿಸಿ, ಬಿಜೆಪಿ ನಾಯಕಿ ದಗ್ಗುಬಾಟಿ ಪುರಂದರೇಶ್ವರಿ ಅವರನ್ನು ರಾಜ್ಯ ಬಿಜೆಪಿ ಮುಖ್ಯಸ್ಥೆಯನ್ನಾಗಿ ಮಾಡಲಾಗಿದೆ. ಇವರು ತೆಲುಗು ದೇಶಂ ಪಾರ್ಟಿ ಸಂಸ್ಥಾಪಕ ಮುಖ್ಯಸ್ಥ ಎನ್​.ಟಿ.ರಾಮರಾವ್​ ಅವರ ಪುತ್ರಿ. 2014ರಲ್ಲಿ ತೆಲುಗು ದೇಶಂ ಪಾರ್ಟಿ ತೊರೆದು ಬಿಜೆಪಿ ಸೇರಿದ್ದರು. ಅವರೀಗ ರಾಜ್ಯಾಧ್ಯಕ್ಷೆಯಾಗಿದ್ದಾರೆ.

ಹಾಗೇ, ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸುನಿಲ್ ಜಾಖಡ್​ ಮತ್ತು ಜಾರ್ಖಂಡ್​ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಾಬುಲಾಲ್ ಮರಾಂಡಿ ನೇಮಕಗೊಂಡಿದ್ದಾರೆ. ಇದರಲ್ಲಿ ಸುನಿಲ್ ಜಾಖಡ್ ಅವರು ಕಾಂಗ್ರೆಸ್​ನಲ್ಲಿದ್ದವರು. ಕಳೆದ ವರ್ಷ ಮೇ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನು ಬಾಬುಲಾಲ್​ ಮರಾಂಡಿ ಅವರು ಜಾರ್ಖಂಡ್​ನ ಮೊದಲ ಮುಖ್ಯಮಂತ್ರಿಯಾಗಿದ್ದವರು, ಸದ್ಯ ಅಲ್ಲಿನ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು.

ಈ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಯಾವಾಗ?

ತೆಲಂಗಾಣದಲ್ಲಿ ಇದೇ ವರ್ಷ ಡಿಸೆಂಬರ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗೇ, ಆಂಧ್ರಪ್ರದೇಶದಲ್ಲಿ 2024ರ ಜೂನ್​ನಲ್ಲಿ, ಅಂದರೆ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನಸಭೆ ಎಲೆಕ್ಷನ್ ನಡೆಯಲಿದೆ. ಇನ್ನು ಜಾರ್ಖಂಡ್​ನಲ್ಲಿ ಕೂಡ 2024ರಲ್ಲಿ, ಪಂಜಾಬ್​ನಲ್ಲಿ ವಿಧಾನಸಭೆ ಚುನಾವಣೆ ಸದ್ಯಕ್ಕಿಲ್ಲ. 2022ರಲ್ಲಷ್ಟೇ ಅಲ್ಲಿ ಎಲೆಕ್ಷನ್​ ಮುಗಿದಿದ್ದು, 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಮೇಲೆ ಹೆಚ್ಚಿನ ಒತ್ತುಕೊಡಲು ಶುರು ಮಾಡಿದೆ. ಆಂಧ್ರಪ್ರದೇಶದಲ್ಲಿ ಕಿರಣ್​ ಕುಮಾರ್ ರೆಡ್ಡಿ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯನನ್ನಾಗಿ ನೇಮಕ ಮಾಡಿದೆ.

ಇದನ್ನೂ ಓದಿ: BJP Karnataka: ಗೊಂದಲ ಇಲ್ಲ ಎಂದ ಬಿ.ಎಸ್‌. ಯಡಿಯೂರಪ್ಪ; ಸದನದಲ್ಲಿ ಅಶ್ವತ್ಥನಾರಾಯಣ-ಯತ್ನಾಳ್‌ ಗುಸುಗುಸು ಗುಟ್ಟೇನು?

ಕರ್ನಾಟಕದಲ್ಲಿ ಯಾರೂ ಇಲ್ಲ!

ಕರ್ನಾಟಕದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಇನ್ನೂ ನೇಮಕ ಮಾಡದೆ ಇರುವುದು ಟೀಕೆಗೆ ಕಾರಣವಾಗಿದೆ. ಇಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ), ಬಸವರಾಜ ಪಾಟೀಲ್ ಯತ್ನಾಳ್​, ಅಶ್ವತ್ಥ್​ ನಾರಾಯಣ್​ ಮತ್ತು ಆರ್.ಅಶೋಕ್ ಪ್ರಮುಖವಾಗಿ ರೇಸ್​​ನಲ್ಲಿದ್ದಾರೆ. ಹಾಗೇ, ಇನ್ನೊಂದೆಡೆ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಅಶ್ವತ್ಥ್​ ನಾರಾಯಣ್​, ವಿ.ಸೋಮಣ್ಣ ಮತ್ತಿತರರು ಫುಲ್ ಫೈಟ್​ನಲ್ಲಿದ್ದಾರೆ. ಆದರೆ ಈ ಸ್ಥಾನಗಳಿಗೆ ನಾಯಕರ ಆಯ್ಕೆ ಹೈಕಮಾಂಡ್​ಗೂ ಕಗ್ಗಂಟಾಗಲು ಇಲ್ಲಿನ ಬಿಜೆಪಿಯ ಆಂತರಿಕ ಕಾದಾಟವೇ ಕಾರಣವಾಗಿದೆ. ಸೋತ ಪಕ್ಷದಲ್ಲಿ ಪ್ರತಿಯೊಬ್ಬರೂ ಸ್ಥಾನಮಾನಕ್ಕಾಗಿ ಹುಡುಕುತ್ತಿರುವುದೇ ಸಮಸ್ಯೆ ತಂದೊಡ್ಡಿದೆ.

Exit mobile version