ಭೋಪಾಲ್: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನ ಮಾಡಿದ್ದ ಗ್ವಾಲಿಯರ್-ಚಂಬಲ್ನ ಬಿಜೆಪಿ ಮುಖಂಡ ಪ್ರೀತಮ್ ಸಿಂಗ್ ಲೋಧಿ (Pritam Singh Lodhi)ಯನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ವಿವಾದಾತ್ಮಕ ಭಾಷಣ ಮಾಡಿದ್ದ ಅವರನ್ನು ಇಂದು ಬೆಳಗ್ಗೆ ಭೋಪಾಲ್ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಕರೆಸಲಾಗಿತ್ತು. ಬಳಿಕ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡಲಾಗಿದೆ. ಇವರು ಬ್ರಾಹ್ಮಣರಿಗೆ ಅಪಮಾನ ಮಾಡಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಹಾಗೇ, ಅಪಾರ ವಿರೋಧವೂ ವ್ಯಕ್ತವಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅವಂತಿ ಬಾಯಿ ಲೋಧಿ ಜನ್ಮದಿನದ ನಿಮಿತ್ತ ಶಿವಪುರಿಯ ಖರೈಹ್ ಎಂಬ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೀತಮ್ ಸಿಂಗ್ ಲೋಧಿ, ‘ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಮತ್ತು ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಯಾವುದೇ ಒಳ್ಳೆಯ ಕುಟುಂಬದಲ್ಲಿ ಒಬ್ಬ ಚೆಂದನೆಯ ಹೆಣ್ಣುಮಗಳು ಕಂಡರೆ ಸಾಕು, ಆ ಮನೆಯಲ್ಲಿ ಊಟ ಮಾಡಲು ಅವರು ಬಯಸುತ್ತಾರೆ. ಹಾಗೆ, ಊಟಕ್ಕೆ ಕುಳಿತಾಗ, ಯುವತಿಯರೆಲ್ಲ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು, ವಯಸ್ಸಾದವರೆಲ್ಲ ಹಿಂದೆ ಕೂರಬೇಕು ಎನ್ನುತ್ತಾರೆ’ ಎಂದೂ ವ್ಯಂಗ್ಯ ಮಾಡಿದ್ದರು. ಅವರು ಈ ಮಾತುಗಳನ್ನಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಬಿಜೆಪಿಯ ಯುವಮೋರ್ಚಾ ನಾಯಕ ಪ್ರವೀಣ್ ಮಿಶ್ರಾ ಪೊಲೀಸರಿಗೆ ದೂರು ನೀಡಿ, ‘ಲೋಧಿ ಸಮುದಾಯಗಳ ಮಧ್ಯೆ, ಜನರ ಮಧ್ಯೆ ದ್ವೇಷ ಹರಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.
ಪ್ರೀತಮ್ ಸಿಂಗ್ ಲೋಧಿ, ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರ ಆಪ್ತವಲಯದಲ್ಲಿ ಇದ್ದವರು. ಶಿವಪುರಿಯ ಪಿಚ್ಚೋರೆ ವಿಧಾನಸಭಾ ಕ್ಷೇತ್ರದಲ್ಲಿ 2013ರಲ್ಲಿ ಮತ್ತು 2018ರಲ್ಲಿ ಸೋತಿದ್ದಾರೆ. ಆದರೂ ಗ್ವಾಲಿಯರ್-ಚಂಬಲ್ ಪ್ರದೇಶಗಳಲ್ಲಿ ಇವರು ಪ್ರಬಲ ನಾಯಕ. ತುಂಬ ಸಭ್ಯರೇನೂ ಅಲ್ಲ, ನಾಲ್ಕು ಕೊಲೆಯತ್ನ, ಎರಡು ಕೊಲೆ ಪ್ರಕರಣ ಸೇರಿ ಒಟ್ಟು 37 ಕೇಸ್ಗಳು ಇವರ ವಿರುದ್ಧ ದಾಖಲಾಗಿವೆ.
ಲೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಗವಾನ್ ದಾಸ್ ಸಬ್ನಾನಿ,‘ಲೋಧಿಯವರು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಆರೋಪ ಮಾಡಿದ್ದಾರೆ. ಇಂಥದ್ದನ್ನೆಲ್ಲ ನಾವು ಸಹಿಸಿಕೊಳ್ಳೋದೇ ಇಲ್ಲ. ನಮ್ಮ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಮೊದಲು ಅವರಿಗೆ ನೋಟಿಸ್ ಕೊಟ್ಟೆವು. ಅದಕ್ಕೆ ಪ್ರತಿಯಾಗಿ ಲೋಧಿ ಕ್ಷಮಾಪಣೆಯನ್ನೂ ಕೋರಿದರು. ಆದರೆ ಅವರು ಕೊಟ್ಟ ಸ್ಪಷ್ಟನೆ ತೃಪ್ತಿದಾಯಕವಾಗಿಲ್ಲ. ಹಾಗಾಗಿ ಆರು ವರ್ಷಗಳ ಕಾಲದವರೆಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Egg episode| ಆಪರೇಷನ್ ಕಮಲ ಶಾಸಕರಿಗಷ್ಟೇ ಅಲ್ಲ, ಪುಂಡರಿಗೂ ಇದ್ಯಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ