Site icon Vistara News

BJP Candidates List : ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಘಟಾನುಘಟಿ ನಾಯಕರಿವರು…

Modi sha

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (BJP Candidates List) ಪ್ರಕಟಿಸಿದೆ. ಬಿಜೆಪಿ ಮುಂಬರುವ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವ ಪಣ ತೊಟ್ಟಿದೆ. ಅಂತೆಯೇ ಬಿಡುಗಡೆಗೊಂಡಿರುವ ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಸೇರಿದ್ದಾರೆ. ಈ ಮೂಲಕ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲೇ ಬಿಜೆಪಿ ತನ್ನ ಬಲವನ್ನು ಪ್ರದರ್ಶಿಸಿದೆ.

2024 ರ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ.

ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಅವರು ಈಗಾಗಲೇ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದಾರೆ ಮತ್ತು ಈ ಬಾರಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. 2014 ರಲ್ಲಿ ಪ್ರಧಾನಿ ಮೋದಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದರು. ಅದೇ ರತಿ 2019 ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಜಯಭೇರಿ ಬಾರಿಸಿದ್ದರು.

ಅಮಿತ್ ಶಾ

2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಪ್ರಚಂಡ ವಿಜಯದತ್ತ ಮುನ್ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್​ನ ಗಾಂಧಿನಗರದಿಂದ ಸ್ಪರ್ಧಿಸಲಿದ್ದಾರೆ.

ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂಬರುವ ಚುನಾವಣೆಯಲ್ಲಿ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ : ಬಿಜೆಪಿ ಪಟ್ಟಿ ಪ್ರಕಟ: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್?‌

ಸ್ಮೃತಿ ಇರಾನಿ

2019 ರಲ್ಲಿ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಜಯಗಳಿಸಿದ ನಂತರ ಸ್ಮೃತಿ ಇರಾನಿ ಅವರಿಗೆ ಮತ್ತೊಮ್ಮೆ ಉತ್ತರ ಪ್ರದೇಶದ ಅದೇ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ

ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು 2002ರಿಂದ ಕಾಂಗ್ರೆಸ್​ ಪಕ್ಷದ ಮೂಲಕ ಪಾರಮ್ಯ ಮೆರೆದಿದ್ದ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು 2019ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯ ಕೃಷ್ಣ ಪಾಲ್ ಸಿಂಗ್ ಯಾದವ್ ವಿರುದ್ಧ ಸೋತಿದ್ದರು.

ಶಿವರಾಜ್ ಸಿಂಗ್ ಚೌಹಾಣ್

ಕಳೆದ ವರ್ಷ ನಡೆದ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ವಿಜಯ ಕಂಡ ಹೊರತಾಗಿಯೂ ಮುಖ್ಯಮಂತ್ರಿಯಾಗದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಧಿಕಾರದಲ್ಲಿ ಮುಂದುವರಿಸಿರಲಿಲ್ಲ. ಅವರೀಗ ವಿದಿಶಾದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

ಕಿರಣ್ ರಿಜಿಜು

ಪ್ರಸ್ತುತ ಭೂ ವಿಜ್ಞಾನ ಖಾತೆಯನ್ನು ಹೊಂದಿರುವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ. 2019 ರಲ್ಲಿ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗಿನಿಂದ, ರಿಜಿಜು ಕಾನೂನು ಮತ್ತು ಯುವ ವ್ಯವಹಾರಗಳಂತಹ ಹಲವಾರು ಪ್ರಮುಖ ಸಚಿವಾಲಯಗಳನ್ನು ಮುನ್ನಡೆಸಿದ್ದಾರೆ.

ರಾಜೀವ್ ಚಂದ್ರಶೇಖರ್

ಕಾಂಗ್ರೆಸ್ ನ ಶಶಿ ತರೂರ್ ಪ್ರತಿನಿಧಿಸುವ ತಿರುವನಂತಪುರಂ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ರಾಜ್ಯಸಭೆಗೆ ಮರುನಾಮಕರಣಗೊಳ್ಳದ ಸಚಿವರಲ್ಲಿ ಒಬ್ಬರಾದ ಚಂದ್ರಶೇಖರ್ ಅವರು ಇತ್ತೀಚೆಗೆ ತಮ್ಮ ಮೊದಲ ಲೋಕಸಭಾ ಚುನಾವಣೆಯ ಸುಳಿವು ನೀಡಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಇನ್ನಷ್ಟು ರೋಮಾಂಚಕಾರಿ ಹಂತ ಏರುವುದಾಗಿ ಹೇಳಿಕೊಂಡಿದ್ದರು.

ಹೇಮಾ ಮಾಲಿನಿ

ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರನ್ನು ಮಥುರಾದಿಂದ ಮತ್ತೆ ಕಣಕ್ಕಿಳಿಸಲಾಗಿದೆ. 2014 ಮತ್ತು 2019 ರ ಚುನಾವಣೆಗಳಲ್ಲಿ, ಹಿರಿಯ ಬಾಲಿವುಡ್ ನಟ ಎರಡೂ ಬಾರಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದರು.

ಭೂಪೇಂದರ್ ಯಾದವ್

ಸವಾಲುಗಳನ್ನು ಎದುರಿಸುವಲ್ಲಿ ಬಿಜೆಪಿಯ ಪ್ರಬಲ ನಾಯಕರಾಗಿರುವ ಭೂಪೇಂದರ್ ಯಾದವ್ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಪಕ್ಷದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ತಮ್ಮ ಮೊದಲ ಲೋಕಸಭಾ ಚುನಾವಣೆಗೆ ಕಾಲಿಡುತ್ತಿದ್ದಾರೆ. ರಾಜಸ್ಥಾನದ ಅಲ್ವಾರ್ ನಿಂದ ಅವರು ಕಣಕ್ಕೆ ಇಳಿದಿದ್ದಾರೆ .

2019 ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿದೆ. ಆದರೆ ಪ್ರಸ್ತುತ ಅದು ಲೋಕಸಭೆಯಲ್ಲಿ 290 ಸದಸ್ಯರನ್ನು ಹೊಂದಿದೆ, ಇದರಲ್ಲಿ ಕೆಲವು ಸಂಸದರು ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಆಯೋಗವು ಈ ತಿಂಗಳ ಕೊನೆಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಮತ್ತು ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ.

Exit mobile version