ನವ ದಹೆಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಹಿಂದು ಉಗ್ರಗಾಮಿ ಸನ್ಯಾಸಿ ಎಂದು ಕರೆದ ಅಮೆರಿಕದ ಮುಸ್ಲಿಮ್ ಕೌನ್ಸಿಲ್ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ವೈಯಕ್ತಿಕ ತೇಜೋವಧೆ ಎಂಬುದಾಗಿ ಆರೋಪಿಸಿದೆ. ಸ್ವಿಜರ್ಲೆಂಡ್ನ ದಾವೋಸ್ನಲ್ಲಿ ವರ್ಲ್ಡ್ ಎಕನಾಮಿಕ್ ಫೋರಮ್ನಲ್ಲಿ (WEF) ಯೋಗಿ ಆತಿಥ್ಯನಾಥ್ ಅವರು ಪಾಲ್ಗೊಳ್ಳುವುದನ್ನು ಆಕ್ಷೇಪಿಸಿ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (IAMC) ಆಯೋಜಕರಿಗೆ ಪತ್ರ ಬರೆದಿತ್ತು. ಆ ಪತ್ರದಲ್ಲಿ ಯೋಗಿ ಆತಿಥ್ಯನಾಥ್ ಅವರನ್ನು ಮುಸ್ಲಿಮ್ ವಿರೋಧಿ ಎಂದು ಬಿಂಬಿಸಲಾಗಿದೆ.
ಭಾರತವನ್ನು ವಿಶ್ವ ಗುರು ಮಾಡಲು ಹೊರಟಿರುವ ನಾಯಕರ ವಿರುದ್ಧ ವಿಶ್ವ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಸಚಿವ ಹಾಗೂ ಬಿಜೆಪಿ ನಾಯಕ ಧರಮ್ ಪಾಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಮೋದಿಯ ಕನಸನ್ನು ನನಸಾಗಿಸಲು ಹಗಲಿರುಳು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತದ ಘನತೆಯನ್ನು ಕುಗ್ಗಿಸುವ ಉದ್ದೇಶದಿಂದ ಕೆಲವರು ಮಿಥ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇವೆಲ್ಲವೂ ಕುತಂತ್ರ . ಹಿಂದೆ ಇದೇ ಮಾದರಿಯ ಆರೋಪಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾಡಲಾಗುತ್ತಿತ್ತು. ಈಗ ಯೋಗಿ ಆದಿತ್ಯನಾಥ್ ಅವರನ್ನು ಗುರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸುವ ವ್ಯಕ್ತಿಗಳು ಉತ್ತರ ಪ್ರದೇಶಕ್ಕೆ ಬರಬೇಕು. ಇಲ್ಲಿ ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನೋಡಬೇಕು. ಯೋಗಿ ಜಾರಿಗೆ ತಂದಿರುವ ಹಲವು ಯೋಜನೆಗಳ ಫಲ ಮುಸ್ಲಿಮರಿಗೂ ದೊರೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಏನಿದು ವಿವಾದ?
ಸ್ವಿಜರ್ಲೆಂಡ್ನಲ್ಲಿ ದಾವೋಸ್ನಲ್ಲಿ ಜನವರಿ 16ರಂದು ಆರಂಭಗೊಂಡಿರುವ ವರ್ಲ್ಡ್ ಎಕನಾಮಿಕ್ ಫೋರಂ ಐದು ದಿನಗಳ ನಡೆಯಲಿದೆ. ಯೋಗಿ ಆತಿಥ್ಯನಾಥ್ ಅವರು ಆ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮಂಡಿಸಬೇಕಾಗಿತ್ತು. ಇದನ್ನು ಐಎಎಮ್ಸಿ ವಿರೋಧಿಸಿದೆ.
ಯೋಗಿ ಆದಿತ್ಯನಾಥ್ ಅವರು ಮಾನವತೆಯ ವಿರುದ್ಧ ನಡೆಸುತ್ತಿರುವ ಅಪರಾಧವನ್ನು ಕಾನೂನುಬದ್ಧಗೊಳಿಸಬಾರದು. ಅವರೊಬ್ಬರು ಹಿಂದು ಉಗ್ರಗಾಮಿ ಸನ್ಯಾಸಿ. ಸಿಎಎ ವಿರೋಧಿಸಿದವರನ್ನು ನಿಂದಿಸಿದವರು. ಅವರೊಬ್ಬ ಕುಖ್ಯಾತ ವ್ಯಕ್ತಿ ಎಂಬುದಾಗಿ ಮುಸ್ಲಿಮ್ ಕೌನ್ಸಿಲ್ ಆರೋಪಿಸಿತ್ತು.
ಯೋಗಿ ಅವರು ಅಪರಾಧದ ದಾಖಲೆಗಳನ್ನು ಹೊಂದಿದ್ದಾರೆ. ಜನರನ್ನು ವಿಭಜಿಸುವ ಮೂಲಕ ರಾಜಕೀಯ ನಡೆಸುತ್ತಿದ್ದಾರೆ ಎಂಬುದಾಗಿ ಕೌನ್ಸಿಲ್ ವರದಿ ನೀಡಿದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ.
ಇದನ್ನೂ ಓದಿ | CM Yogi Adityanath | ಮುಂಬಯಿನಲ್ಲಿ ಉದ್ಯಮಿಗಳು, ಬಾಲಿವುಡ್ ನಿರ್ಮಾಪಕರ ಜತೆ ಸಿಎಂ ಯೋಗಿ ಆದಿತ್ಯನಾಥ್ ಮಾತುಕತೆ