ನವ ದೆಹಲಿ: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯನ್ನು ಬಿಜೆಪಿ ಹೆಜ್ಜೆಹೆಜ್ಜೆಗೂ ಟೀಕಿಸುತ್ತಿದೆ. ಈಗಾಗಲೇ ಯಾತ್ರೆಯಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಟಿ ಶರ್ಟ್ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ಇದೀಗ, ‘ರಾಹುಲ್ ಗಾಂಧಿ ಮತ್ತು ಪಾದ್ರಿ ಜಾರ್ಜ್ ಪೊನ್ನಯ್ಯ’ ಭೇಟಿಯನ್ನು ಖಂಡಿಸಿದೆ. ಪಾದ್ರಿ ಜಾರ್ಜ್ ಪೊನ್ನಯ್ಯ ಹಿಂದೆಲ್ಲ ಹಲವು ಬಾರಿ ಹಿಂದು ದ್ವೇಷಿ ಹೇಳಿಕೆಗಳನ್ನು ನೀಡಿ ಅರೆಸ್ಟ್ ಆಗಿದ್ದವರು. ಅಷ್ಟೇ ಅಲ್ಲ, ‘ಭಾರತ ಮಾತೆ, ಭೂಮಾತೆಯ ಕಲ್ಮಶಗಳು ನನ್ನನ್ನೂ ಕಲುಷಿತಗೊಳಿಸಬಾರದು ಎಂಬ ಕಾರಣಕ್ಕೆ ನಾನು ಶೂ ಧರಿಸಿದ್ದೇನೆ’ ಎಂಬಂಥ ದುರಹಂಕಾರದ, ಭಾರತ ಮಾತೆಗೆ ಅಪಮಾನ ಮಾಡುವಂಥ ಮಾತುಗಳನ್ನಾಡಿದ್ದರು. ಇಂಥ ದೇಶ ಒಡೆಯುವವರ ಜತೆ ಸೇರಿಕೊಂಡು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆಯಾ?’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಪಾದ್ರಿ ಜಾರ್ಜ್ ಭೇಟಿ ಮಾಡಿ ಮಾತುಕತೆ ನಡೆಸಿದ ವಿಡಿಯೋವನ್ನೂ ಶೆಹಜಾದ್ ಪೂನಾವಾಲಾ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ದೇವರ ಬಗ್ಗೆ ಮಾತುಕತೆ ನಡೆಸುತ್ತಿದ್ದಾಗ ರಾಹುಲ್ ಗಾಂಧಿ, ‘ಜೀಸಸ್ ದೇವರ ಒಂದು ರೂಪ’ ಎನ್ನುತ್ತಾರೆ. ಆಗ ಜಾರ್ಜ್ ಪೊನ್ನಯ್ಯ ‘ಇಲ್ಲ, ಯೇಸು ಒಬ್ಬನೇ ನಿಜವಾದ ದೇವರು. ಅವರು ಶಕ್ತಿ ಮಾತೆ ಮತ್ತು ಇತರ ದೇವರಂತೆ ಅಲ್ಲ’ ಎನ್ನುತ್ತಾರೆ. ‘ಶಕ್ತಿ ದೇವತೆಗಳೆಲ್ಲ ಭೂಮಿಗೆ ಬಂದಿಲ್ಲ. ಆದರೆ ಯೇಸು ಭೂಮಿಗೆ ಬಂದು ಇಲ್ಲಿನ ಜನರ ಜತೆ ಬೆರೆತು, ಅವರ ಕಷ್ಟ ಪರಿಹರಿಸಿದ ನಿಜವಾದ ದೇವರು’ ಎಂಬ ವಾದವನ್ನು ಜಾರ್ಜ್ ಪೊನ್ನಯ್ಯ ಮಂಡಿಸುತ್ತಾರೆ. ಆದರೆ ಈ ಮಾತುಗಳ ಬಗ್ಗೆ ಬಿಜೆಪಿ ವಕ್ತಾರ, ಮುಖಂಡರು ತಕರಾರು ಎತ್ತಿದ್ದಾರೆ.
ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಈ ವಿಡಿಯೋದಲ್ಲಿನ ಆಡಿಯೋವನ್ನು ಬಿಜೆಪಿ ಬದಲಿಸಿದೆ. ವಿಡಿಯೋಕ್ಕೂ-ಆಡಿಯೋಕ್ಕೂ ಸಂಬಂಧವೇ ಇಲ್ಲ. ಕೇಸರಿ ಪಾಳೆಯ ದ್ವೇಷದ ಫ್ಯಾಕ್ಟರಿಯನ್ನೇ ಇಟ್ಟುಕೊಂಡಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಯಶಸ್ಸು, ಸಿಗುತ್ತಿರುವ ಜನಬೆಂಬಲ ನೋಡಿ ಹೆದರಿದಂತೆ ಇದೆ’ ಎಂದು ಹೇಳಿದ್ದಾರೆ.
ಅಂದಹಾಗೇ, ಈ ರೋಮನ್ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಮೊದಲಿನಿಂದಲೂ ವಿವಾದಿತರೇ ಆಗಿದ್ದಾರೆ. ಹಿಂದು ಧರ್ಮವನ್ನು ಅವಹೇಳನ ಮಾಡಿದ್ದ ಇವರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ 2021ರಲ್ಲಿ ಅರೆಸ್ಟ್ ಆಗಿದ್ದರು. 2021ರ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಗೆಲ್ಲಲು ತಾನೇ ಕಾರಣ, ಈ ಪಕ್ಷಕ್ಕೇ ಮತ ಹಾಕುವಂತೆ ನಾನೇ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಹೇಳಿದ್ದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆಯೂ ಅವಹೇಳನ ಮಾಡಿದ್ದರು.
ಇದನ್ನೂ ಓದಿ: Bharat Jodo Yatra | 3ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ