Site icon Vistara News

ಹಲವು ಸರ್ಕಾರಗಳನ್ನು ಕೊಂದ ಸರಣಿ ಹಂತಕ ಬಿಜೆಪಿ ಎಂದ ಕೇಜ್ರಿವಾಲ್​; ವಿಶ್ವಾಸ ಮತ ಯಾಚನೆಗೆ ನಿರ್ಧಾರ !

Arvind Kejriwal

ನವ ದೆಹಲಿ: ಬಿಜೆಪಿ ಕೇಂದ್ರ ಸರ್ಕಾರ ಒಂದು ಸರಣಿ ಹಂತಕ (Serial Killer​) ಎಂದು ಆಮ್​ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ. ಮನೀಷ್​ ಸಿಸೋಡಿಯಾ ವಿರುದ್ಧ ದೆಹಲಿ ನೂತನ ಅಬಕಾರಿ ನೀತಿ ಭ್ರಷ್ಟಾಚಾರ ಪ್ರಕರಣದಡಿ ತನಿಖೆ ಪ್ರಾರಂಭವಾದ ಬೆನ್ನಲ್ಲೇ ಇಡೀ ಆಪ್​​ ಪಕ್ಷದ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹಾಗೇ ಇಂದು ದೆಹಲಿ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಾತನಾಡಿ, ‘ಬಿಜೆಪಿ ಹಲವು ರಾಜ್ಯಗಳ ಸರ್ಕಾರಗಳನ್ನು ಪತನಗೊಳಿಸಿದೆ. ನಮ್ಮ ದೇಶದ ವಿವಿಧ ರಾಜ್ಯಗಳ ಸರ್ಕಾರಗಳನ್ನು ಕೊಂದ ಸರಣಿ ಹಂತಕ ಬಿಜೆಪಿ. ಪ್ರತಿ ಕೊಲೆಯನ್ನೂ ಒಂದೇ ಮಾದರಿಯಲ್ಲೇ ಮಾಡುತ್ತದೆ’ ಎಂದು ಹೇಳಿದ್ದಾರೆ.

ಆಮ್​ ಆದ್ಮಿ ಪಕ್ಷದ ಶಾಸಕರಿಗೆ ತಲಾ 20 ಕೋಟಿ ರೂಪಾಯಿಯ ಆಮಿಷವನ್ನು ಬಿಜೆಪಿ ಒಡ್ಡಿತ್ತು. ಮನೀಷ್​ ಸಿಸೋಡಿಯಾರಿಗೆ ಆಪ್​ ಬಿಟ್ಟು ಬಿಜೆಪಿಗೆ ಬಂದರೆ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಆ ಪಕ್ಷ ಆಮಿಷವೊಡ್ಡಿತ್ತು. ಆದರೆ ನಮ್ಮ ಪಕ್ಷದಲ್ಯಾರೂ ನಂಬಿಕೆ ದ್ರೋಹಿಗಳಿಲ್ಲ. ಹೀಗಾಗಿ ಬಿಜೆಪಿಯ ಪ್ರಯತ್ನ ಫಲಿಸಲಿಲ್ಲ ಎಂದು ಈಗಾಗಲೇ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ. ಅದರಂತೆ ದೆಹಲಿಯಲ್ಲಿ ಕೂಡ ಬಿಜೆಪಿ ಆಪರೇಶನ್​ ಕಮಲ ಪ್ರಾರಂಭ ಮಾಡಿದ ಬಗ್ಗೆ ಚರ್ಚಿಸುವ ಸಲುವಾಗಿಯೇ ಇಂದು ಆಮ್​ ಆದ್ಮಿ ಪಕ್ಷ ವಿಶೇಷ ಅಧಿವೇಶನ ಕರೆದಿತ್ತು. ಅದರಲ್ಲಿ ಅರವಿಂದ್ ಕೇಜ್ರಿವಾಲ್​ ಆಡಿದ ಮಾತುಗಳು ಹೀಗಿವೆ..

1. ಮನೀಷ್​ ಸಿಸೋಡಿಯಾಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ 14 ತಾಸು ಶೋಧ ನಡೆಸಿತು. ಆದರೆ ಅಲ್ಲಿ ಒಂದೇ ಒಂದು ಪೈಸೆಯೂ ಸಿಗಲಿಲ್ಲ. ಆಭರಣ, ನಗದು, ಯಾವುದೇ ಭೂಮಿ, ಆಸ್ತಿ ಅಕ್ರಮ ನಡೆದಿದ್ದನ್ನು ಸಾಕ್ಷೀಕರಿಸುವ ದಾಖಲೆಗಳೂ ಸಿಗಲಿಲ್ಲ. ಮನೀಷ್​ ಸಿಸೋಡಿಯಾಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ದಾಳಿ ಮಾಡಿದ್ದೇ ಒಂದು ವಂಚನೆ.
2. ಬಿಜೆಪಿ ಸರ್ಕಾರ ಈಗಾಗಲೇ ಗೋವಾ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಬಿಹಾರ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯಗಳಲ್ಲಿ ಸರ್ಕಾರಗಳನ್ನು ಪತನಗೊಳಿಸಿದೆ. ಹೀಗೆ ಒಂದಾದ ಮೇಲೆ ಒಂದು ಸರ್ಕಾರವನ್ನು ಕೊಂದ ಬಿಜೆಪಿ ಸರಣಿ ಹಂತಕ. ಇತ್ತೀಚಿನ ವರ್ಷಗಳಲ್ಲಿ ಆ ಪಕ್ಷ ಸುಮಾರು 266 ಶಾಸಕರನ್ನು ಖರೀದಿ ಮಾಡಿದೆ.
3. ದೆಹಲಿಯ ಆಮ್​ ಆದ್ಮಿ ಪಕ್ಷದ ವಿರುದ್ಧ ಎಲ್ಲ ದೇಶ ವಿರೋಧಿ ಶಕ್ತಿಗಳೂ ಒಂದಾಗಿವೆ. ಗುಜರಾತ್​ ಚುನಾವಣೆ ಮುಗಿಯುವವರೆಗೂ ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಕೆಲಸ ಮುಂದುವರಿಯುತ್ತದೆ.
4. ಆಮ್ ಆದ್ಮಿ ಪಕ್ಷದ 40 ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡಿತ್ತು. ಆದರೆ ನಾವೆಲ್ಲ ಒಟ್ಟಾಗಿದ್ದೇವೆ, ಆಪ್​ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂಬುದನ್ನು ತೋರಿಸಲು ನಾನು ಸದನದಲ್ಲಿ ನಾಳೆ (ಆಗಸ್ಟ್​ 27) ವಿಶ್ವಾಸ ಮತ ಯಾಚನೆ ಮಾಡಲು ನಿರ್ಧರಿಸಿದ್ದೇನೆ.

ಇದನ್ನೂ ಓದಿ: ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್​ ಆಫರ್​, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್​ ಸಿಸೋಡಿಯಾ ಆರೋಪ

Exit mobile version