ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂಗ್ಲೆಂಡ್ನ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ನೀಡಿದ ಉಪನ್ಯಾಸದಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿದೇಶಿ ನೆಲದಲ್ಲಿ ನಿಂತು, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವ ಜತೆಗೆ, ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ, ಕುತಂತ್ರಿ ರಾಷ್ಟ್ರ ಚೀನಾವನ್ನು ಹೊಗಳಿದ್ದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಹಲವು ಪ್ರಮುಖ ನಾಯಕರು ರಾಹುಲ್ ಗಾಂಧಿ ವಿರುದ್ಧ ತಿರುಗಿಬಿದ್ದಿದ್ದಾರೆ. ಟ್ವೀಟ್ ಮೂಲಕ ರಾಹುಲ್ ಗಾಂಧಿಯವರನ್ನು ಟೀಕಿಸುತ್ತಿದ್ದಾರೆ.
ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಲರ್ನಿಂಗ್ ಟು ಲಿಸನ್ ಇನ್ ದಿ 21 ಸೆಂಚುರಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಅವರು ಅದರಲ್ಲಿ 2ನೇ ವಿಶ್ವಯುದ್ಧದ ಬಳಿಕ ಚೀನಾ ಮತ್ತು ಅಮೆರಿಕ ರಾಷ್ಟ್ರಗಳ ಎರಡು ವಿಭಿನ್ನ ದೃಷ್ಟಿಕೋನಗಳು ಎಂಬ ವಿಷಯದ ಬಗ್ಗೆಯೂ ಮಾತನಾಡುವುದಿತ್ತು. ಈ ವೇಳೆ ಚೀನಾವನ್ನು ರಾಹುಲ್ ಗಾಂಧಿ ಹೊಗಳಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ರಾಹುಲ್ ಗಾಂಧಿಯವರು ಚೀನಾವನ್ನು ಸೂಪರ್ ಪವರ್, ಮಹತ್ವಾಕಾಂಕ್ಷಿ ಎಂದು ಹೊಗಳಿದ್ದಾರೆ. ಅಲ್ಲಿನ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯನ್ನು ಶ್ಲಾಘಿಸಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.( ಬೆಲ್ಟ್ ಆ್ಯಂಡ್ ರೋಡ್-ವಿಸ್ತೃತ ಮತ್ತು ಪರಸ್ಪರ ಅವಲಂಬಿತ ಮಾರುಕಟ್ಟೆಗಾಗಿ ಚೀನಾ 2013ರಲ್ಲಿ ತೆಗೆದುಕೊಂಡ ಉಪಕ್ರಮ. ನೆಲ-ಜಲ ಮಾರ್ಗಗಳ ಮೂಲಕ ಇತರ ದೇಶಗಳನ್ನು ಸಂಪರ್ಕಿಸಿ ವ್ಯವಹಾರ-ವ್ಯಾಪಾರ ನಡೆಸುತ್ತಿದೆ. ಇದರಿಂದ ಚೀನಾದ ಆರ್ಥಿಕ, ರಾಜಕೀಯ ಅಭಿವೃದ್ಧಿಯಾಗುವ ಜತೆ, ತಂತ್ರಜ್ಞಾನದಲ್ಲಿ ಉನ್ನತ ಮಟ್ಟಕ್ಕೆ ಏರಲು ಆ ರಾಷ್ಟ್ರಕ್ಕೆ ಸಹಾಯ ಮಾಡಿದೆ).
ಟ್ವೀಟ್ ಮೂಲಕ ರಾಹುಲ್ ಗಾಂಧಿಯವರಿಗೆ ಕ್ಲಾಸ್ ತೆಗೆದುಕೊಂಡ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ‘ಚೀನಾ ಮತ್ತು ಅಲ್ಲಿನ ಕಮ್ಯೂನಿಸ್ಟ್ ಪಕ್ಷದ ಸದಸ್ಯರ ಸಿದ್ಧಾಂತಗಳು ತಮ್ಮನ್ನು ಆಕರ್ಷಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಚೀನಾದಿಂದ ತೆಗೆದುಕೊಂಡಿದ್ದ ದೇಣಿಗೆಯ ಋಣವನ್ನು ಈಗ ಗಾಂಧಿ ಕುಟುಂಬ ತೀರಿಸುತ್ತಿದೆ. ಚೀನಾವನ್ನು ರಾಹುಲ್ ಗಾಂಧಿ ಯಾಕೆ ಹೊಗಳುತ್ತಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂಗೂ ಗೊತ್ತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕ ಅಮಿತ್ ಮಾಳವಿಯಾ ಕೂಡ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ. ‘ರಾಹುಲ್ ಗಾಂಧಿ ಚೀನಾದ ನಿರಂಕುಶಾಧಿಕಾರವನ್ನು ನಾಚಿಕೆಯಿಲ್ಲದೆ ಶ್ಲಾಘಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಇನ್ನಿತರ ಬಿಜೆಪಿ ನಾಯಕರೂ ಕೂಡ ರಾಹುಲ್ ಗಾಂಧಿ ಉಪನ್ಯಾಸವನ್ನು ಖಂಡಿಸಿದ್ದಾರೆ.