ಮುಂಬಯಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಜೂ.29ರಂದು ರಾತ್ರಿ ಪತನವಾಗಿದ್ದು, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ, ಸರ್ಕಾರ ರಚನೆಗೆ ಮುಂದಾಗಿದೆ. ಜುಲೈ 1ಕ್ಕೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಇಂದು ಸಂಜೆ 7 ಗಂಟೆಗೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ಇಬ್ಬರೂ ಜಂಟಿಯಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಬಿ.ಎಸ್.ಕೋಶ್ಯಾರಿಯವರನ್ನು ಭೇಟಿಯಾಗಿ, ಸರ್ಕಾರ ರಚನೆಗೆ ಹಕ್ಕುಮಂಡನೆ ಮಾಡಲಿದ್ದಾರೆ.
ಬಂಡಾಯವೆದ್ದು ಅಸ್ಸಾಂನ ಗುವಾಹಟಿ ರೆಸಾರ್ಟ್ ಸೇರಿಕೊಂಡಿದ್ದ ಏಕನಾಥ್ ಶಿಂಧೆ ಅಲ್ಲಿಂದ ಗೋವಾಕ್ಕೆ ತೆರಳಿ, ಇಂದು ಮುಂಬಯಿಗೆ ಬಂದು, ಮಲ್ಬಾರ್ ಹಿಲ್‌ನಲ್ಲಿರುವ ಫಡ್ನವೀಸ್ ನಿವಾಸ ಸಾಗರ್‌ಗೆ ಹೋಗಿ ಅವರನ್ನು ಭೇಟಿಯಾಗಿದ್ದಾರೆ. ಅಲ್ಲೊಂದು ಸಣ್ಣ ಸಭೆಯೂ ನಡೆದಿದೆ. ಶಿಂಧೆ ಬಣದ ಶಾಸಕರೂ ಸೇರಿ ತಮಗೆ ಒಟ್ಟೂ 170 ಶಾಸಕರ ಬೆಂಬಲವಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇನ್ನೇನಿದ್ದರೂ ಸಂಜೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವುದಷ್ಟೇ ಬಾಕಿ ಇದೆ.
ಶಿವಸೇನೆಯ 4೦ಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂಧೆ ಹಿಂದೆ ಹೋದರು. ಅಷ್ಟಾದರೂ ಉದ್ಧವ್ ಠಾಕ್ರೆ ಬಣ ಸರ್ಕಾರ ಉಳಿಸಿಕೊಳ್ಳಲು ಎಲ್ಲ ರೀತಿಯ ಹೋರಾಟ ಮಾಡಿತು. ಆದರೆ ರಾಜ್ಯಪಾಲರು ಕೊರೊನಾದಿಂದ ಗುಣಮುಖರಾಗಿ ಬಂದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಇನ್ನಷ್ಟು ಚುರುಕಾಯಿತು. ಬಹುಮತ ಸಾಬೀತು ಮಾಡುವಂತೆ ಉದ್ಧವ್ ಠಾಕ್ರೆಗೆ ರಾಜ್ಯಪಾಲರು ಸೂಚಿಸಿದ್ದರು. ಈ ಆದೇಶದ ವಿರುದ್ಧ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅಲ್ಲಿಯೂ ಹಿನ್ನಡೆಯಾಯಿತು. ಬಹುಮತ ಸಾಬೀತು ಪಡಿಸಬೇಕು ಎಂದು ರಾಜ್ಯಪಾಲರು ನೀಡಿರುವ ಸೂಚನೆಗೆ ತಡೆಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ಅದಾದ ತಕ್ಷಣವೇ ಉದ್ಧವ್ ಠಾಕ್ರೆ ತಮ್ಮ ಸೋಲೊಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಉದ್ಧವ್ ಠಾಕ್ರೆ ರಾಜೀನಾಮೆ ಬೆನ್ನಲ್ಲೇ ರಾಜ್ ಠಾಕ್ರೆಯಿಂದ ಟ್ವೀಟ್; ಬರೆದ ಸಾಲುಗಳಿಗೇನು ಅರ್ಥ?