ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನು 2 ದಿನ ಮಾತ್ರ ಬಾಕಿ ಇರುವಾಗ ಬಿಜೆಪಿ ಮಾಜಿ ಸಚಿವ ಮತ್ತು ಹಿರಿಯ ನಾಯಕ ಜಯನಾರಾಯಣ್ ವ್ಯಾಸ್ ಮತ್ತು ಅವರ ಪುತ್ರ ಸಮೀರ್ ವ್ಯಾಸ್ ಇಬ್ಬರೂ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಜಯನಾರಾಯಣ್ ವ್ಯಾಸ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಮಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು.
ಜಯನಾರಾಯಣ್ ವ್ಯಾಸ್ ಅವರು ನವೆಂಬರ್ 5ರಂದು ಬಿಜೆಪಿ ತೊರೆದಿದ್ದರು. ಗುಜರಾತ್ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ, 2007ರಿಂದ 2012ರವರೆಗೆ ಸಚಿವರಾಗಿದ್ದ ಇವರು ಈಗ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದರು. ನನ್ನ ಹಿರಿತನ, ಅನುಭವವನ್ನು ಬಿಜೆಪಿ ಮುಖಂಡರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿ ಬಿಜೆಪಿ ಬಿಟ್ಟಿದ್ದರು. ವ್ಯಾಸ್ ಅವರು ಕಾಂಗ್ರೆಸ್ ಸೇರುತ್ತಾರೆಂಬ ಮಾತು ಅಂದಿನಿಂದಲೂ ಕೇಳಿಬರುತ್ತಿತ್ತು. ಆದರೆ ದೃಢಪಟ್ಟಿರಲಿಲ್ಲ. ಇಂದು ಬೆಳಗ್ಗೆ ತನ್ನ ಮಗನೊಂದಿಗೆ ಗುಜರಾತ್ನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗೆ ಆಗಮಿಸಿದ ಅವರು, ಅಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವ್ಯಾಸ್ ‘ಗುಜರಾತ್ನಲ್ಲಿ ನರ್ಮದಾ ಸೇರಿ ಎಲ್ಲ ನೀರಾವರಿ ಯೋಜನೆಗಳೂ 1960ಕ್ಕೂ ಮೊದಲೇ ರೂಪುಗೊಂಡಿವೆ. ಎಲ್ಲವೂ ಕಾಂಗ್ರೆಸ್ನ ಯೋಜನೆಗಳೇ ಆಗಿವೆ’ ಎಂದು ಹೇಳಿದರು. ಬಿಜೆಪಿಯ ಯಾವುದೇ ನಾಯಕರ ಹೆಸರು ಹೇಳದೆ ಆಕ್ರೋಶ ವ್ಯಕ್ತಪಡಿಸಿದ ಅವರು ‘ಬಿಜೆಪಿಯಲ್ಲಿ ಎರಡು ಆಲದ ಮರಗಳು ಇವೆ. ಇನ್ಯಾವುದೇ ಮರಗಳು(ನಾಯಕರು) ಬೆಳೆಯಲೂ ಆ ಮರಗಳು ಅವಕಾಶ ಕೊಡುವುದಿಲ್ಲ. ಮೊದಲು ಒಂದು ಆಲದ ಮರ ದೊಡ್ಡದಾಗಿ ಬೆಳೆಯುತ್ತ ಹೋಯಿತು. ಅದಕ್ಕೆ ಇನ್ನೊಂದು ಆಲದ ಮರ ಸೇರಿತು. ಆ ಬೃಹತ್ ಆಲದ ಮರಗಳ ಕೆಳಗೆ ಇನ್ಯಾವುದೇ ಮರ-ಗಿಡಗಳೂ ಬೆಳೆಯುವುದಿಲ್ಲ. ಇಂಥ ನಾಯಕರು ಇರುವ ಬಿಜೆಪಿಯಿಂದ ಗುಜರಾತ್ ಆಳಲ್ಪಟ್ಟರೆ, ಅದು ಈ ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಇರುವುದಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ: Gujarat Election | ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 125 ಸೀಟು: ಗೆಹ್ಲೋಟ್ ವಿಶ್ವಾಸ