Site icon Vistara News

Keshari Nath Tripathi | ಬಿಜೆಪಿ ಹಿರಿಯ ನಾಯಕ, ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಕೇಸರಿನಾಥ್​ ತ್ರಿಪಾಠಿ ನಿಧನ

BJP Leader Keshari Nath Tripathi Died

ಲಖನೌ: ಬಿಜೆಪಿ ಹಿರಿಯ ನಾಯಕ, ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ನಿಧನರಾಗಿದ್ದಾರೆ. 88 ವರ್ಷದ ಅವರು ಇಂದು ಮುಂಜಾನೆ 5ಗಂಟೆ ಹೊತ್ತಿಗೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ಮೃತಪಟ್ಟಿದ್ದಾರೆ. ಕೆಲವು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಡಿಸೆಂಬರ್​​ನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದರು. ಅದೇ ಸಮಯದಲ್ಲಿ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಆದರೆ ಬರುಬರುತ್ತ ಅವರ ಆರೋಗ್ಯ ಹದಗೆಟ್ಟಿತ್ತು. ಆಹಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಮೂತ್ರ ಹೋಗುತ್ತಿರಲಿಲ್ಲ. ಹೀಗಾಗಿ ಕೆಲ ದಿನ ಐಸಿಯುವಿನಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು.

ಕೇಸರಿನಾಥ್​ ತ್ರಿಪಾಠಿ ಮೂಲತಃ ಉತ್ತರ ಪ್ರದೇಶದ ಅಲಹಾಬಾದ್​ನವರು. 1934ರಲ್ಲಿ ಜನಿಸಿದ್ದರು. ಇವರು ಉತ್ತರ ಪ್ರದೇಶ ಝುಸಿ ವಿಧಾನಸಭಾ ಕ್ಷೇತ್ರದಿಂದ ಒಂದು ಬಾರಿ ಮತ್ತು ಅಲಹಾಬಾದ್​ ದಕ್ಷಿಣ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಸೇರಿ ಒಟ್ಟು ಆರು ಬಾರಿ ಗೆದ್ದು ಶಾಸಕರಾಗಿದ್ದರು. ಉತ್ತರ ಪ್ರದೇಶ ವಿಧಾನಸಭೆಗೆ ಮೂರು ಅವಧಿಗೆ ಸ್ಪೀಕರ್​ ಆಗಿದ್ದವರು. ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಜನತಾ ಪಾರ್ಟಿ ಸರ್ಕಾರವಿದ್ದಾಗ 1977ರಿಂದ 1979ರವರೆಗೆ ಹಣಕಾಸು ಮತ್ತು ಮಾರಾಟ ತೆರಿಗೆ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ್ದರು.

ಪಶ್ಚಿಮ ಬಂಗಾಳದಲ್ಲಿ 2014ರಿಂದ 2019ರವರೆಗೆ ರಾಜ್ಯಪಾಲರಾಗಿದ್ದರು. ಅದಕ್ಕೂ ಮುನ್ನ 2017ರಲ್ಲಿ ಬಿಹಾರದಲ್ಲಿ ಹೆಚ್ಚುವರಿ ರಾಜ್ಯಪಾಲರಾಗಿ ಕಾರ್ಯನಿವರ್ಹಿಸಿದ್ದರು. ಮಿಜೋರಾಂ, ಮೇಘಾಲಯಗಳಲ್ಲೂ ಹೆಚ್ಚುವರಿ ರಾಜ್ಯಪಾಲರಾಗಿದ್ದರು. ಇನ್ನು ಅಲಹಾಬಾದ್ ಹೈಕೋರ್ಟ್​​ನಲ್ಲಿ ಹಿರಿಯ ವಕೀಲರಾಗಿದ್ದರು. ಅಷ್ಟೇ ಅಲ್ಲ, ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಅದರಲ್ಲೂ ‘ಸಂಚಯಿತ: ಕೇಸರಿನಾಥ ತ್ರಿಪಾಠಿ’ ಎಂಬ ಪುಸ್ತಕ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಕೊವಿಡ್​ 19 ಕಾಲಿಟ್ಟಾಗಿನಿಂದ ತ್ರಿಪಾಠಿ ಎರಡು ಸಲ ಸೋಂಕಿಗೆ ತುತ್ತಾಗಿದ್ದರು. ಎರಡೂ ಸಲವೂ ಅವರು ದೀರ್ಘಾವಧಿ ಚಿಕಿತ್ಸೆ ಪಡೆದೇ ಚೇತರಿಸಿಕೊಂಡಿದ್ದರು. ಆಗ ಲಖನೌದಲ್ಲಿರುವ ಸಂಜಯ್​ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ (SGPGIMS)ಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: SM Krishna | ಬಿಜೆಪಿ ಹಿರಿಯ ಮುಖಂಡ, ಮಾಜಿ ಸಿಎಂ ಎಸ್‌ ಎಂ ಕೃಷ್ಣ ರಾಜಕೀಯ ಜೀವನಕ್ಕೆ ಗುಡ್‌ಬೈ

Exit mobile version