ನವದೆಹಲಿ: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ನಾಯಕ ರಾಜು ಝಾ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಪೂರ್ವ ಬುರ್ದ್ವಾನ್ ಜಿಲ್ಲೆಯ ಶಕ್ತಿಗಢ ಎಂಬಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಗೂ ಗಾಯವಾಗಿದೆ, ಗುಂಡು ಹೊಡೆದ ದುಷ್ಕರ್ಮಿಗಳು ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕನ ಹತ್ಯೆಗೆ ನಿಜವಾದ ಕಾರಣ ಇನ್ನೂ ಗೊತ್ತಾಗಿಲ್ಲ(BJP Leader Shot Dead).
ಪೂರ್ವ ಬುರ್ದ್ವಾನ್‌ನ ಶಕ್ತಿಗಢ್‌ನ ರಾಷ್ಟ್ರೀಯ ಹೆದ್ದಾರಿ 19ರಲ್ಲಿರುವ ಜನಪ್ರಿಯ ಸಿಹಿತಿಂಡಿ ಮಳಿಗೆಯ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ನಡೆದಿದೆ. ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಪಶ್ಚಿಮ ಬಂಗಾಳದ ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಸ್ವೀಟ್ ಮಾರ್ಟ್ ಬಳಿ ನಾಲ್ಕೈದು ಜನರು ಸೇರಿದ್ದರು. ನೀಲಿ ಬಣ್ಣದ ನಾಲ್ಕು ಚಕ್ರಗಳ ವಾಹನವೊಂದು ಈ ಅಂಗಡಿಯ ಬಳಿ ಬಂದಿದೆ. ಆಗ ವಾಹನದಲ್ಲಿ ಕುಳಿತಿದ್ದವರು ರಾಜು ಝಾ ಅವರತ್ತ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜು ಝಾ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ದುರ್ಗಾಪುರ ಮೂಲದ ಉದ್ಯಮಿ ಮತ್ತು ಕಲ್ಲಿದ್ದಲು ವ್ಯಾಪಾರಿಯಾಗಿದ್ದರು. ದುಷ್ಕರ್ಮಿಗಳು ಝಾ ಅವರತ್ತ ಗುಂಡು ಹಾರಿಸುತ್ತಿದ್ದಂತೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ಆಸ್ಪತ್ರೆಯಲ್ಲಿ ಘೋಷಿಸಿದರು. ಈ ಘಟನೆ ವೇಳೆ ಮತ್ತೊಬ್ಬರು ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Kirpal Singh | ರಾಜಸ್ಥಾನದಲ್ಲಿ ಬಿಜೆಪಿ ನಾಯಕನ ಹತ್ಯೆ, ಕಾರಣವೇನು?
ಅಪರಿಚಿತರ ಗುಂಡೇಟಿಗೆ ಬಲಿಯಾಗಿರುವ ರಾಜು ಝಾ ಅವರು ಸಿಲ್ಪಾಂಚಲದಲ್ಲಿ ಅಕ್ರಮ ಕಲ್ಲಿದ್ದಲು ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. ಝಾ ವಿರುದ್ಧ ಅನೇಕ ಕೇಸ್‌ಗಳೂ ಇವೆ ಎಂದು ಹೇಳಲಾಗುತ್ತಿದೆ.