ನವ ದೆಹಲಿ: ಭಾರತದ ನೋಟುಗಳ ಕರೆನ್ಸಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮುದ್ರಿಸಬೇಕು ಎಂದು ಬಿಜೆಪಿ ನಾಯಕ ರಾಮ್ ಕದಮ್ ಆಗ್ರಹಿಸಿದ್ದಾರೆ. ಈಗ ನೋಟುಗಳ ಮೇಲೆ ಅವರ ಚಿತ್ರ ಮುದ್ರಿಸಬೇಕು, ಇವರ ಫೋಟೋ ಹಾಕಬೇಕು ಎಂದು ಒಬ್ಬೊಬ್ಬರೂ, ಒಂದೊಂದು ಬೇಡಿಕೆಯನ್ನು ಇಡುತ್ತಿದ್ದಾರೆ. ಭಾರತದ ಆರ್ಥಿಕತೆ ಸುಧಾರಣೆಯಾಗಬೇಕು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವುದು ತಪ್ಪಿಸಬೇಕು ಎಂದರೆ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಫೋಟೋದೊಂದಿಗೆ ಲಕ್ಷ್ಮೀ ದೇವಿ ಮತ್ತು ಗಣೇಶನ ಫೋಟೋ ಮುದ್ರಿಸಿ ಎಂದು ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಹೀಗೆ ಲಕ್ಷ್ಮೀ-ಗಣೇಶನ ಫೋಟೋ ಹಾಕಿ ಎಂದಿದ್ದ ಅರವಿಂದ್ ಕೇಜ್ರಿವಾಲ್ಗೆ ಮಹಾರಾಷ್ಟ್ರ ಬಿಜೆಪಿ ನಾಯಕ ನಿತೀಶ್ ರಾಣೆ ಪ್ರತ್ಯುತ್ತರ ಕೊಟ್ಟಿದ್ದರು. ಶಿವಾಜಿ ಚಿತ್ರ ಇರುವ ಒಂದು ನೋಟಿನ ಫೋಟೋ ಶೇರ್ ಮಾಡಿಕೊಂಡು, ಇದು ಪರ್ಫೆಕ್ಟ್ ಎಂದಿದ್ದರು. ಈ ಮೂಲಕ ನೋಟಿನ ಮೇಲೆ ಶಿವಾಜಿ ಮಹಾರಾಜರ ಚಿತ್ರ ಹಾಕಬೇಕು ಎಂದು ಬೇಡಿಕೆ ಇಟ್ಟಿದ್ದರು.
ಇದೀಗ ಬಿಜೆಪಿ ನಾಯಕ ರಾಮ್ ಕದಮ್ ಅವರು ಟ್ವಿಟರ್ನಲ್ಲಿ 500 ರೂಪಾಯಿ ಮುಖಬೆಲೆಯ ನಾಲ್ಕು ನೋಟುಗಳ ಫೋಟೋ ಹಂಚಿಕೊಂಡಿದ್ದಾರೆ. ಅಂಬೇಡ್ಕರ್, ನರೇಂದ್ರ ಮೋದಿ, ಶಿವಾಜಿ ಮಹಾರಾಜ ಮತ್ತು ವಿಡಿ ಸಾವರ್ಕರ್ ಫೋಟೋಗಳಿರುವ ನೋಟುಗಳನ್ನು ಶೇರ್ ಮಾಡಿಕೊಂಡು ನಯಾ ಭಾರತ್, ಮಹಾನ್ ಭಾರತ್, ಜೈ ಶ್ರೀರಾಮ್, ಜೈ ಮಾತಾ ದಿ..’ ಎಂದು ಟ್ವೀಟ್ ಮಾಡಿದ್ದಾರೆ.
ಹಾಗೇ, ಯಾರ ಬೇಡಿಕೆಯೇ ಆಗಲಿ, ನ್ಯಾಯಸಮ್ಮತವಾಗಿದ್ದರೆ ದೇಶ ಅದನ್ನು ಒಪ್ಪಿಕೊಳ್ಳುತ್ತದೆ. ಆದರೆ ಅರವಿಂದ್ ಕೇಜ್ರಿವಾಲ್ನಂಥವರು ಚುನಾವಣೆ ವೇಳೆಯಲ್ಲಿ ಮಾತ್ರ ದೇವರನ್ನು ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ. ಹಾಗೇ, ನರೇಂದ್ರ ಮೋದಿ ಭಾವಚಿತ್ರ, ಶಿವಾಜಿ, ಅಂಬೇಡ್ಕರ್, ಸಾವರ್ಕರ್ ಫೋಟೋಗಳನ್ನು ನೋಟ್ ಮೇಲೆ ಮುದ್ರಿಸಿದರೆ ಯಾರೂ ಆಕ್ಷೇಪಿಸಲಾರರು ಎಂದು ಹೇಳಿದ್ದಾರೆ.
ಇದನ್ನೂ ಓದಿ: Note Politics | ನೋಟಿನ ಮೇಲೆ ಲಕ್ಷ್ಮೀ, ಗಣೇಶ ಚಿತ್ರ, ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ‘ಶಿವಾಜಿ ಫೋಟೊ’ ತಿರುಗೇಟು