Site icon Vistara News

ತಾನು ಪಾರಾಗಲು ಮಗನ ಆಸ್ಪತ್ರೆಗೆ ದಾಖಲಿಸಿದ ಬಿಜೆಪಿ ಮಾಜಿ ನಾಯಕಿ; ಜೀವ ಉಳಿಸಿದ್ದೇ ಅವನು ಎಂದ ಸೇವಕಿ

Seema Patra

ರಾಂಚಿ: ಜಾರ್ಖಂಡದಲ್ಲಿ ಮನೆ ಕೆಲಸದವಳ ಮೇಲೆ ದೌರ್ಜನ್ಯ ಎಸಗಿ, ಇದೀಗ ಪೊಲೀಸರಿಂದ ಬಂಧಿತಳಾಗಿರುವ ಬಿಜೆಪಿಯ ಮಾಜಿ ನಾಯಕಿ ಸೀಮಾ ಪಾತ್ರಾರ ಪಾಲಿಗೆ ವಿಲನ್​ ಆಗಿದ್ದು ಆಕೆಯ ಪುತ್ರ ಆಯುಷ್ಮಾನ್​. ಅಂದರೆ ತನ್ನಮ್ಮ ಮನೆ ಕೆಲಸದವಳಿಗೆ ನಿಂದಿಸುತ್ತಿರುವ, ಆಕೆಯ ಮೇಲೆ ದೌರ್ಜನ್ಯ ಎಸಗುತ್ತಿರುವ ಫೋಟೋ, ವಿಡಿಯೋಗಳನ್ನೆಲ್ಲ ತನ್ನ ಸ್ನೇಹಿತ ವಿವೇಕ್ ಆನಂದ್ ಬಾಸ್ಕಿ ಎಂಬುವನಿಗೆ ತೋರಿಸಿದ್ದ ಆಯುಷ್ಮಾನ್​, ಹೇಗಾದರೂ ಕೆಲಸದಾಕೆ ಸುನೀತಾರನ್ನು ರಕ್ಷಿಸಬೇಕು ಎಂದು ಕೇಳಿಕೊಂಡಿದ್ದ. ಈ ವಿವೇಕ್​ ಒಬ್ಬ ಸರ್ಕಾರಿ ಉದ್ಯೋಗಿಯಾಗಿದ್ದು, ಆಯುಷ್ಮಾನ್​ ಕೊಟ್ಟ ವಿಡಿಯೋ-ಫೋಟೋಗಳನ್ನೆಲ್ಲ ತೆಗೆದುಕೊಂಡು ನೇರವಾಗಿ ಪೊಲೀಸ್​ ಠಾಣೆಗೆ ಹೋಗಿ, ದೂರು ದಾಖಲಿಸಿದಾಗಲೇ ಸೀಮಾ ಪಾತ್ರ ಅಸಲಿಯತ್ತು ಬಯಲಿಗೆ ಬಂದಿದೆ.

ಆದರೆ ಸೀಮಾ ಇಲ್ಲೂ ತಮ್ಮ ಚಾಕಚಕ್ಯತೆ ತೋರಿಸಿ, ತಾನು ಬಂಧನವಾಗದಂತೆ ತಡೆಯಲು ಪ್ರಯತ್ನ ಮಾಡಿದ್ದಾಳೆ. ಪುತ್ರನೇ ತನ್ನ ಪಾಲಿಗೆ ವಿಲನ್ ಆಗುತ್ತಿದ್ದಾನೆ. ತಾನು ಮನೆ ಕೆಲಸದವಳಿಗೆ ನೀಡುತ್ತಿರುವ ದೌರ್ಜನ್ಯ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂಬ ಸುಳಿವನ್ನು ಅದು ಹೇಗೋ ಪಡೆದ ಸೀಮಾ ಪಾತ್ರಾ, ತನ್ನ ಮಗನನ್ನೇ 10 ದಿನಗಳ ಕಾಲ ಆಸ್ಪತ್ರೆಗೆ ದಾಖಲು ಮಾಡಿದ್ದಳು. ಆಯುಷ್ಮಾನ್​ಗೆ ಅನಾರೋಗ್ಯವೆಂದು ಹೇಳಿ, ರಾಂಚಿಯಲ್ಲಿರುವ ನ್ಯೂರೋ-ಸೈಕಿಯಾಟ್ರಿ ಮತ್ತು ಅಲೈಡ್ ಸೈನ್ಸಸ್ ಆಸ್ಪತ್ರೆಗೆ ಸೇರಿಸಿದ್ದಾಳೆ.

ಬಳಿಕ ಆಯುಷ್ಮಾನ್​ ಮತ್ತು ವಿವೇಕ್​ ಇಬ್ಬರೂ ಸೇರಿ ಸುನೀತಾರನ್ನು ಸೀಮಾ ಪಾತ್ರಾರ ಕಪಿಮುಷ್ಟಿಯಿಂದ ಬಿಡಿಸಿದ್ದರು. ಹೀಗೆ ತನ್ನ ಕ್ರೌರ್ಯವನ್ನು ಬಯಲಿಗೆಳೆದ ಪುತ್ರ ಆಯುಷ್ಮಾನ್​​ನ್ನೂ ಸೀಮಾ ಸುಮ್ಮನೆ ಬಿಟ್ಟಿಲ್ಲ. ಅವನಿಗೂ ಹಿಂಸೆ ಕೊಟ್ಟಿದ್ದಲ್ಲದೆ, 10 ದಿನಗಳ ಕಾಲ ವೃಥಾ ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಸದ್ಯ ಸೀಮಾ ಬಂಧನವಾಗಿದ್ದು, ಆಕೆಯ ಮಗ ಎಲ್ಲಿದ್ದಾನೆಂಬ ಖಚಿತ ಮಾಹಿತಿ ದೊರೆತಿಲ್ಲ.

ಇನ್ನು ಬಂಧನಕ್ಕೂ ಮೊದಲು ತನ್ನ ವಿರುದ್ಧದ ಆರೋಪದ ಬಗ್ಗೆ ಎನ್​ಡಿಟಿವಿ ಬಳಿ ಮಾತನಾಡಿದ್ದ ಸೀಮಾ ಪಾತ್ರಾ, ‘ನಾನು ಕಾಲ ಬಂದಾಗ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಕಾಯಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ರಾಜಕೀಯ ಹುನ್ನಾರ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಸೀಮಾ ಪಾತ್ರಾ ಮನೆ ಕೆಲಸದವಳು ಸುನೀತಾಳನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲು ಮಾಡಲಾಗಿದೆ. ಆಕೆಯ ಮುಖ-ದೇಹದ ಮೇಲೆಲ್ಲ ತುಂಬ ಗಾಯಗಳಾಗಿದೆ. ನಡೆಯಲಾಗದಷ್ಟು ನಿಶ್ಯಕ್ತಿಯಾಗಿದೆ. ಈ ಮಧ್ಯೆ ತನ್ನ ದಾರುಣ ಕಥೆಯನ್ನು ಆಕೆ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ‘ನಾನು 10 ವರ್ಷಗಳಿಂದ ಸೀಮಾ ಪಾತ್ರಾ ಮನೆಯಲ್ಲೇ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಹಿಂಸೆ ಅನುಭವಿಸುತ್ತಿದ್ದೆ. ಹಾಗಿದ್ದಾಗ್ಯೂ ನಾನಿವತ್ತು ಜೀವ ಸಹಿತ ಉಳಿದಿದ್ದೇನೆ ಅಂದರೆ, ಸೀಮಾ ಪಾತ್ರಾ ಪುತ್ರ ಆಯುಷ್ಮಾನ್​ನಿಂದಲೇ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆ ಕೆಲಸದವಳ ಬಳಿ ಟಾಯ್ಲೆಟ್​ ನೆಕ್ಕಿಸಿದ ಬಿಜೆಪಿ ನಾಯಕಿ ಅಮಾನತು; ಮಗನಿಂದಲೇ ಪಾರಾದಳು ಸೇವಕಿ

Exit mobile version