ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಆಪ್ತ, ಬಿಜೆಪಿ ನಾಯಕ ಸುಖಬೀರ್ ಖಟಾನಾ ಅಲಿಯಾಸ್ ಸುಖಿ ಅವರನ್ನು ಐವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇವರು ರಿಥೋಜಿ ಗ್ರಾಮದ ನಿವಾಸಿಯಾಗಿದ್ದು, ಗುರುವಾರ ಮಧ್ಯಾಹ್ನ ಸ್ನೇಹಿತರೊಬ್ಬರೊಂದಿಗೆ ಗುರ್ಗಾಂವ್ನ ಬಟ್ಟೆಯ ಶೋ ರೂಮಿಗೆ ಹೋಗಿದ್ದರು. ಅದೇ ಶೋ ರೂಮ್ಗೇ ನುಗ್ಗಿದ ದುಷ್ಕರ್ಮಿಗಳು ಖಟಾನಾಗೆ ಗುಂಡು ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆರ್ವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸೊಹ್ನಾ ಮಾರುಕಟ್ಟೆ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಸುಖಬೀರ್ ಈ ಸಲ ಸೊಹ್ನಾ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರು. ಘಟನೆ ನಡೆದ ಶೋ ರೂಮ್ನಲ್ಲಿರುವ ಸಿಸಿಟಿವಿ ಫೂಟೇಜ್ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಐವರು ಇದ್ದುದು ದೃಢಪಟ್ಟಿದೆ. ಇಬ್ಬರು ಕಪ್ಪು ಬಣ್ಣದ ಟಿ ಶರ್ಟ್ ಹಾಕಿಕೊಂಡಿದ್ದಾರೆ. ಒಬ್ಬಾತ ಬಿಳಿ ಬಣ್ಣದ ಮತ್ತೊಬ್ಬಾತ ಕೆಂಪು ಬಣ್ಣದ ಶರ್ಟ್ ಹಾಕಿದ್ದಾನೆ. ಇನ್ನೋರ್ವನ ಬಟ್ಟೆಯ ಬಣ್ಣ ಗೊತ್ತಾಗಿಲ್ಲ. ಇವರೆಲ್ಲ ಸೇರಿ ಬಿಜೆಪಿ ನಾಯಕನಿಗೆ ಗುಂಡು ಹೊಡೆದ ದೃಶ್ಯ ಸ್ಪಷ್ಟವಾಗಿ ಗೋಚರಿಸುತ್ತದೆ.
ಡಿಸಿಪಿ ದೀಪಕ್ ಸಹರನ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ವಿಧಿವಿಜ್ಞಾನ ತಂಡವೂ ಭೇಟಿ ಕೊಟ್ಟು ಪರೀಕ್ಷೆ ನಡೆಸಿದೆ. ಸುಖಬೀರ್ ಖಟಾನಾ ಪುತ್ರ ಅನುರಾಗ್ ಪೊಲೀಸರಿಗೆ ದೂರು ನೀಡಿದ್ದು, ‘ಈ ಹತ್ಯೆಯಲ್ಲಿ ತನ್ನ ತಂದೆಯ ಸೋದರ ಮಾವನೊಬ್ಬನ ಕೈವಾಡವಿದೆ’ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: AAP BJP Spar | ದಿಲ್ಲಿಯಲ್ಲಿ ಕ್ಯಾಮೆರಾ ಎದುರೇ ಆಪ್-ಬಿಜೆಪಿ ನಾಯಕರ ವಾಕ್ಸಮರ, ವಿಡಿಯೊ ವೈರಲ್