Site icon Vistara News

ಈರೋಡ್​ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲ ಪಳನಿಸ್ವಾಮಿಗೋ, ಪನ್ನೀರಸೆಲ್ವಮ್​​ಗೋ?-ಇಬ್ಬರನ್ನೂ ಭೇಟಿಯಾದ ಸಿಟಿ ರವಿ, ಅಣ್ಣಾಮಲೈ

BJP Leaders CT Ravi and Annamalai met Edappadi K Palaniswami and O Panneerselvam

#image_title

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದಲ್ಲಿ ದ್ವಿನಾಯಕತ್ವ ಕಗ್ಗಂಟು ಇರುವುದು ಗೊತ್ತೇ ಇದೆ. ಜಯಲಲಿತಾ ಮೃತಪಟ್ಟ ಬಳಿಕ ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸಿದ್ದ ಕೆ.ಪಳನಿಸ್ವಾಮಿ ಮತ್ತು ಒ. ಪನ್ನೀರಸೆಲ್ವ ಈಗ ಬೇರೆಯಾಗಿ, ಪಕ್ಷದಲ್ಲೇ ಎರಡು ಬಣಗಳಾಗಿ ಹೋಗಿದೆ. ಈಗಲ್ಲಿ ಪಳನಿಸ್ವಾಮಿ ಪ್ರಧಾನ ಕಾರ್ಯದರ್ಶಿಯೇ ಆಗಿದ್ದರೂ ಒ. ಪನ್ನೀರಸೆಲ್ವಂ ಬಣ ಅದನ್ನು ಒಪ್ಪುತ್ತಿಲ್ಲ. ಇವರಿಬ್ಬರ ನಡುವಿನ ರಾಜಕೀಯ ಬಿಸಿ, ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮೇಲೆ ಕೂಡ ಪ್ರಭಾವ ಬೀರಿದೆ. ಫೆಬ್ರವರಿ 27ರಂದು ನಡೆಯಲಿರುವ ಬೈ ಎಲೆಕ್ಷನ್​​ಗೆ ಎರಡೂ ಬಣಗಳಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಅಂದರೆ ಈರೋಡ್​ ಉಪಚುನಾವಣೆ ಕಣದಲ್ಲಿ ಎಐಎಡಿಎಂಕೆ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಗೊಂದಲದ ಮಧ್ಯೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಮತ್ತು ಇತರ ನಾಯಕರು ಎಐಎಐಡಿಎಂಕೆ ನಾಯಕರಾದ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರನ್ನು ಭೇಟಿಯಾದರು. ಅವರಿಬ್ಬರ ನಿವಾಸಗಳಿಗೇ ಹೋಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಐಎಡಿಎಂಕೆ ಪಕ್ಷ ಎನ್​ಡಿಒ ಒಕ್ಕೂಟದಲ್ಲಿದ್ದು, ಬಿಜೆಪಿಯ ಮೈತ್ರಿ ಪಕ್ಷ. ಈ ಇಬ್ಬರು ಬಣದ ಅಭ್ಯರ್ಥಿಗಳಲ್ಲಿ ಬಿಜೆಪಿ ಬೆಂಬಲ ಯಾರಿಗೆ ಎಂಬ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ. ಹೀಗಿರುವಾಗ ಸಿಟಿ ರವಿ ಮತ್ತು ಅಣ್ಣಾಮಲೈ ನೇತೃತ್ವದ ನಿಯೋಗ ಇಂದು ಇಬ್ಬರೂ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದೆ.

ಅಂದಹಾಗೇ ಈರೋಡ್​ ಉಪಚುನಾವಣೆಗೆ ಎಐಎಡಿಎಂಕೆಯ ಇ.ಪಳನಿಸ್ವಾಮಿ ಬಣದಿಂದ ಕೆ.ಎಸ್​. ತೆನ್ನರಸು ಕಣದಲ್ಲಿದ್ದರೆ, ಒ.ಪನ್ನೀರಸೆಲ್ವಂ ಬಣದಿಂದ ಸೆಂಥಿಲ್ಮುರುಗನ್ ಅವರನ್ನು ಅಭ್ಯರ್ಥಿ ಮಾಡಲಾಗಿದೆ. ಈ ಮಧ್ಯೆ ಪನ್ನೀರಸೆಲ್ವಂ ಅವರು ಹೇಳಿಕೆ ನೀಡಿ ಈರೋಡ್​ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ನಾವು ನಮ್ಮ ಅಭ್ಯರ್ಥಿಯ ನಾಮಪತ್ರವನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಇದುವರೆಗೂ ಈರೋಡ್​ ಚುನಾವಣೆ ಬಗ್ಗೆ ಸ್ಪಷ್ಟತೆ ಕೊಟ್ಟಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕೆ ಇಳಿಸಲಾಗುತ್ತದೆಯಾ? ಅಥವಾ ಬಿಜೆಪಿ ಬೆಂಬಲ ಇಪಿಎಸ್​ಗೋ? ಒಪಿಎಸ್​ಗೋ? ಎಂಬುದು ಗೊತ್ತಾಗಿಲ್ಲ.

Exit mobile version