ನವ ದೆಹಲಿ: ನೂತನ ಅಬಕಾರಿ ನೀತಿ ಅಕ್ರಮ ಹಗರಣದ ಆರೋಪದಡಿ ಸಿಬಿಐ ತನಿಖೆ ಎದುರಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಇಂದು ಬಿಜೆಪಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ‘ಬಿಜೆಪಿ ಪಕ್ಷ ಆಮ್ ಆದ್ಮಿ ಪಕ್ಷದ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಿದೆ. ನೀವು ಆಮ್ ಆದ್ಮಿ ಪಕ್ಷ ತೊರೆದರೆ 20 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಆಸೆ ತೋರಿಸಿತ್ತು. ಅವರು ಒಪ್ಪದೆ ಇದ್ದುದಕ್ಕೇ ಇಡಿ, ಸಿಬಿಐ ಮೂಲಕ ದಾಳಿ ನಡೆಸುತ್ತಿದೆ. ತನಿಖಾ ಏಜೆನ್ಸಿಗಳ ಮೂಲಕ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.
ಟ್ವೀಟ್ ಮಾಡಿರುವ ಮನೀಷ್ ಸಿಸೋಡಿಯಾ ‘ಅವರು ನನ್ನ ಧ್ವನಿ ಅಡಗಿಸಲು ಪ್ರಯತ್ನ ಮಾಡುತ್ತಿದ್ದಾರೆ. 20-20 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ಅದಕ್ಕೆ ಒಪ್ಪದೆ ಇರುವವರಿಗೆ ಇಡಿ-ಸಿಬಿಐ ಹೆಸರು ಹೇಳಿ ಹೆದರಿಸುತ್ತಿದ್ದಾರೆ. ಒಟ್ಟಾರೆ ನಮ್ಮನ್ನು ಹತ್ತಿಕ್ಕಲು ಎಲ್ಲ ರೀತಿಯ ಪಿತೂರಿ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಇಂಥ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ. ನಾವು ಅರವಿಂದ್ ಕೇಜ್ರಿವಾಲ್ ಗಡಿಯಲ್ಲಿ ಪಳಗಿದವರು ಮತ್ತು ಭಗತ್ ಸಿಂಗ್ ಅನುಯಾಯಿಗಳು. ನಾವು ಜೀವ ಬಿಡುತ್ತೇವೆ ಹೊರತು, ನಂಬಿಕೆ ದ್ರೋಹ ಮಾಡುವುದಿಲ್ಲ. ನಮ್ಮ ಎದುರು ಇಡಿ, ಸಿಬಿಐಗಳೆಲ್ಲ ಕೆಲಸಕ್ಕೆ ಬರುವುದಿಲ್ಲ’ ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಲ್ಲಿನ ಶಿಕ್ಷಣ ಸಚಿವ, ಅಬಕಾರಿ ಇಲಾಖೆ ಉಸ್ತುವಾರಿ ಹೊತ್ತಿದ್ದ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಪ್ರಾರಂಭವಾಗಿದೆ. ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಅಷ್ಟೇ ಅಲ್ಲ, ಸಿಬಿಐ ಎಫ್ಐಆರ್ನಲ್ಲಿ ಮನೀಷ್ ಸಿಸೋಡಿಯಾರನ್ನೇ ಆರೋಪಿ ನಂಬರ್ 1 ಎಂದು ಉಲ್ಲೇಖಿಸಲಾಗಿದೆ. ಇಷ್ಟೆಲ್ಲದರ ಮಧ್ಯೆ ಆಪ್ ಸಂಸದ ಸಂಜಯ್ ಸಿಂಗ್ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ‘ನಮ್ಮ ಆಪ್ ಪಕ್ಷದ ನಾಲ್ವರು ಶಾಸಕರಿಗೆ ಬಿಜೆಪಿಯಿಂದ ತಲಾ 20 ಕೋಟಿ ರೂಪಾಯಿ ಆಫರ್ ಬಂದಿದೆ. ಅವರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲಾಗಿದೆ. ಆದರೆ ಅವರು ಒಪ್ಪಲಿಲ್ಲ. ಯಾರು ಬಿಜೆಪಿಗೆ ಸೇರುತ್ತಾರೋ ಅವರಿಗೆ 20 ಕೋಟಿ ಕೊಡುತ್ತೇವೆ. ಜತೆಗೆ ಮತ್ತೊಬ್ಬರನ್ನು ಕರೆದುಕೊಂಡು ಬರುವವರಿಗೆ 25 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು’ ಎಂಬುದಾಗಿ ತಿಳಿಸಿದ್ದರು.
ಸುದ್ದಿಗೋಷ್ಠಿ ನಡೆಸಿದ್ದ ಸಂಜಯ್ ಸಿಂಗ್, ‘ನಮ್ಮ ಪಕ್ಷದ ಅಜಯ್ ದತ್ತ, ಸಂಜೀವ್ ಝಾ, ಸೋಮನಾಥ್ ಭಾರತಿ, ಕುಲದೀಪ್ ಅವರಿಗೆ ಬಿಜೆಪಿಯಿಂದ 20 ಕೋಟಿ ರೂಪಾಯಿ ಆಫರ್ ಬಂದಿತ್ತು. ಬಿಜೆಪಿಯ ಪ್ರಮುಖ ನಾಯಕರೇ ಅವರನ್ನು ಭೇಟಿಯಾಗಿ ಆಮಿಷವೊಡ್ಡಿದ್ದರು’ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಮನೀಷ್ ಸಿಸೋಡಿಯಾ ಕೂಡ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಆಪ್ ಬಿಟ್ಟರೆ ನನಗೆ ಸಿಎಂ ಪೋಸ್ಟ್ ಕೊಡುವುದಾಗಿ ಬಿಜೆಪಿ ನಾಯಕರು ಆಮಿಷವೊಡ್ಡಿದ್ದರು’ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Manish Sisodia | ಮನೀಷ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಅಸ್ಸಾಂ ಕೋರ್ಟ್ ಸಮನ್ಸ್