ನವ ದೆಹಲಿ: ಭಾರತ್ ಜೋಡೋ ಯಾತ್ರೆ ನವದೆಹಲಿಗೆ ಕಾಲಿಟ್ಟ ಬೆನ್ನಲ್ಲೇ ರಾಹುಲ್ ಗಾಂಧಿಯವರು ಒಂದೇ ಸಮ ದೇಶದ ಮಾಜಿ ಪ್ರಧಾನಮಂತ್ರಿಗಳ ಸಮಾಧಿ ಸ್ಥಳಗಳಿಗೆ ಭೇಟಿ ಕೊಟ್ಟು ಪುಷ್ಪನಮನ ಸಲ್ಲಿಸುತ್ತಿದ್ದಾರೆ. ಇಂದಿರಾ ಗಾಂಧಿಯವರ ಸಮಾಧಿಯಿರುವ ಶಕ್ತಿ ಸ್ಥಳ, ಜವಾಹರ್ ಲಾಲ್ ನೆಹರೂ ಸಮಾಧಿ ಇರುವ ಶಾಂತಿ ವನ, ರಾಜೀವ್ ಗಾಂಧಿಯನ್ನು ಸಮಾಧಿ ಮಾಡಲಾದ ವೀರಭೂಮಿ, ವಿಜಯ್ ಘಾಟ್ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕ ಮತ್ತು ಸದೈವ ಅಟಲ್ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಭೇಟಿ ಕೊಟ್ಟು ಗೌರವ ಸಲ್ಲಿಸಿದ್ದಾರೆ. ಇದರೊಂದಿಗೆ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೂ ಭೇಟಿಕೊಟ್ಟು ನಮನ ಸಲ್ಲಿಸಿದ್ದಾರೆ.
ಆದರೆ ರಾಹುಲ್ ಗಾಂಧಿಯವರ ಈ ನಡೆಯಲ್ಲಿ ಎಷ್ಟರಮಟ್ಟಿಗೆ ಪ್ರಾಮಾಣಿಕತೆ ಇದೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ನಿಜ ಹೇಳಬೇಕೆಂದರೆ ರಾಹುಲ್ ಗಾಂಧಿ ನಿಷ್ಕಪಟವಾಗಿ ಮಾಜಿ ಪ್ರಧಾನಿಗಳ ಸಮಾಧಿಗೆ ಗೌರವ ಸಲ್ಲಿಸುತ್ತಿಲ್ಲ. ಅವರ ನೂರಾರು ವೇಷ-ನಾಟಕಗಳಲ್ಲಿ ಇದೂ ಒಂದು. ರಾಹುಲ್ ಗಾಂಧಿಯಲ್ಲಿ ನಿಜಕ್ಕೂ ಪ್ರಾಮಾಣಿಕತೆ ಇದ್ದರೆ ಅವರು ಹೈದರಾಬಾದ್ನಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾಗ ಅಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಸಮಾಧಿಸ್ಥಳವಾದ ಜ್ಞಾನ ಭೂಮಿಗೂ ಭೇಟಿಕೊಡುತ್ತಿದ್ದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ನವೆಂಬರ್ ತಿಂಗಳಲ್ಲಿ ತೆಲಂಗಾಣದಲ್ಲಿ ನಡೆದಿತ್ತು. ಆ ವೇಳೆ ರಾಹುಲ್ ಗಾಂಧಿಯವರು ನೆಕ್ಲೇಸ್ ರಸ್ತೆಯಲ್ಲಿದ್ದ ಇಂದಿರಾಗಾಂಧಿ ಪ್ರತಿಮೆಗೆ ಹೂವು ಹಾಕಿ, ಗೌರವ ಅರ್ಪಿಸಿದ್ದರು. ಆದರೆ ಅಲ್ಲೇ ಸಮೀಪದಲ್ಲಿರುವ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಸಮಾಧಿಗೆ ಭೇಟಿ ಕೊಟ್ಟಿರಲಿಲ್ಲ. ರಾಹುಲ್ ಗಾಂಧಿಯವರ ಈ ವರ್ತನೆಯನ್ನು ಆಗ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ. ಕೆ. ಲಕ್ಷ್ಮಣ್ ಅವರು ಖಂಡಿಸಿದ್ದರು. ‘ರಾಹುಲ್ ಗಾಂಧಿ ಯಾಕೆ ಪಿ.ವಿ. ನರಸಿಂಹರಾವ್ ಸ್ಮಾರಕಕ್ಕೆ ಭೇಟಿ ಕೊಡಲಿಲ್ಲ? ಇದೇನಾ ಕಾಂಗ್ರೆಸ್ ಸಂಸ್ಕೃತಿ? ರಾಹುಲ್ ಗಾಂಧಿ ಕ್ಷಮೆ ಕೇಳಬೇಕು’ ಎಂದು ಹೇಳಿದ್ದರು. ಈಗ ಅದೇ ವಿಷಯವನ್ನು ಪ್ರಸ್ತಾಪ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವಿಯಾ ‘ರಾಹುಲ್ ಗಾಂಧಿಯದ್ದು ಪಕ್ಕಾ ಬೂಟಾಟಿಕೆ’ ಎಂದಿದ್ದಾರೆ.
ಪಿ.ವಿ.ನರಸಿಂಹ್ ರಾವ್ ಅವರನ್ನು ಸೋನಿಯಾ ಗಾಂಧಿ ಸರಿಯಾಗಿ ನಡೆಸಿಕೊಂಡಿಲ್ಲ. ಅವರ ಮೃತದೇಹವನ್ನು ಎಐಸಿಸಿ ಪ್ರಧಾನ ಕಚೇರಿಯೊಳಗೆ ಬಿಡಲಿಲ್ಲ. ನರಸಿಂಹ್ ರಾವ್ ಅವರನ್ನು ಸೋನಿಯಾ ಗಾಂಧಿ ಹೊಗಳಿದ್ದು ತುಂಬ ಕಡಿಮೆ ಎಂಬೆಲ್ಲ ವಿಷಯಗಳು ಈಗಲೂ ಚರ್ಚೆಗೆ ಬರುತ್ತವೆ. ಪಿವಿ ನರಸಿಂಹ್ ರಾವ್ ವಿಚಾರದಲ್ಲಿ ಸೋನಿಯಾ ಗಾಂಧಿ ಬಗ್ಗೆ ಈಗಾಗಲೇ ಅಸಮಾಧಾನ ಇರುವ ನಡುವೆಯೇ ರಾಹುಲ್ ಗಾಂಧಿ ಕೂಡ ಅವರೊಬ್ಬರ ಸಮಾಧಿಗೆ ಭೇಟಿ ನೀಡದೆ, ಮತ್ತೆ ಆಡುವವರ ಬಾಯಿಗೆ ಆಹಾರವಾಗಿದ್ದಾರೆ.