ನವ ದೆಹಲಿ: ಸ್ವಲ್ಪ ದಿನಗಳ ಹಿಂದೆ ದೆಹಲಿಯಲ್ಲಿ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ)ನಿಂದ ಆಯೋಜನೆಯಾಗಿದ್ದ ಸಮಾರಂಭದಲ್ಲಿ ಭಾಷಣ ಮಾಡಿದ್ದ ಪಶ್ಚಿಮ ದೆಹಲಿ ಬಿಜೆಪಿ ಸಂಸದ ಪರ್ವೇಶ್ ಸಾಹೀಬ್ ಸಿಂಗ್ ವರ್ಮಾ ಈಗ ಸಂಕಷ್ಟಕ್ಕೀಡಾಗಿದ್ದಾರೆ. ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಂದು ಅವರು ಒಂದು ನಿರ್ದಿಷ್ಟ ಸಮುದಾಯ (ಮುಸ್ಲಿಮರು)ದ ವಿರುದ್ಧ ಮಾತನಾಡಿದ್ದರು. ಮುಸ್ಲಿಮರ ಹೆಸರು ಹೇಳಿರಲಿಲ್ಲ, ಆದರೆ ಪರೋಕ್ಷವಾಗಿ ಅವರಿಗೇ ಹೇಳಿದ ಮಾತು ಅದು ಎಂದು ದೊಡ್ಡ ವಿವಾದ ಸೃಷ್ಟಿಯಾಗಿತ್ತು.
ಅಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಪರ್ವೇಶ್ ‘ಆ ಸಮುದಾಯದಿಂದ ಆಗುತ್ತಿರುವ ಸಮಸ್ಯೆಗಳಿಗೆಲ್ಲ ಒಂದೇ ಪರಿಹಾರ. ಅವರನ್ನು ಎಲ್ಲ ಕಡೆ, ಎಲ್ಲ ವಿಚಾರದಲ್ಲೂ ಬಹಿಷ್ಕರಿಸಬೇಕು’ ಎಂದು ಹೇಳಿದ್ದರು. ಸಂಸದರ ಈ ಮಾತಿಗೆ ಪ್ರತಿಪಕ್ಷಗಳು, ರಾಜಕೀಯ ವಿಶ್ಲೇಷಕರು ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಪಕ್ಷದೊಳಗಿನ ಹಿರಿಯ ನಾಯಕರೂ ಪರ್ವೇಶ್ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ. ಪರ್ವೇಶ್ರಿಂದ ಪಕ್ಷ ಸ್ಪಷ್ಟನೆ ಕೇಳಿದ್ದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೂ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಜುಲೈ ತಿಂಗಳಲ್ಲಿ ಹೈದರಾಬಾದ್ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದರು. ಪಕ್ಷದ ಮುಖಂಡರು, ಕಾರ್ಯಕಾರಿಗಳು ವಿವಾದಾತ್ಮಕ ಹೇಳಿಕೆಗಳಿಂದ ದೂರವೇ ಉಳಿಯಬೇಕು. ಅನವಶ್ಯಕವಾಗಿ ಮಾತನಾಡಿ, ವಿರೋಧ ಪಕ್ಷಗಳ ಬಾಯಿಗೆ ಆಹಾರ ಆಗಬೇಡಿ ಎಂದು ಕಿವಿಮಾತು ಹೇಳಿದ್ದರು. ಅದರಾಚೆಗೆ ಇತ್ತೀಚೆಗೆ ಬಿಜೆಪಿ, ಆರ್ಎಸ್ಎಸ್ಗಳೆಲ್ಲ ಮುಸ್ಲಿಂ ಸಮುದಾಯವನ್ನು ತಲುಪಲು ಕಸರತ್ತು ನಡೆಸುತ್ತಿವೆ. ಅದರ ಮಧ್ಯೆ ಪಕ್ಷದವರೇ ಇಂಥ ಮಾತುಗಳನ್ನಾಡಿದರೆ ಅದು ದೊಡ್ಡ ಹೊಡೆತ ಎಂಬುದು ವರಿಷ್ಟರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Karva Chauth | ಕರ್ವಾ ಚೌಥ್‌ಗೆ ಮುಸ್ಲಿಮರು ಹಿಂದೂ ವಿವಾಹಿತ ಮಹಿಳೆಗೆ ಮೆಹಂದಿ ಹಾಕುವಂತಿಲ್ಲ: ವಿಎಚ್‌ಪಿ