ಲಖನೌ: ಉತ್ತರ ಪ್ರದೇಶ ಬಿಜೆಪಿ ಇಂದು (ಅ.16) ಅಲ್ಲಿನ ಪಸ್ಮಾಂದಾ ಮುಸ್ಲಿಂ ಸಮುದಾಯದ ಹಿರಿಯ ನಾಯಕರ ಜತೆ ಲಖನೌದಲ್ಲಿ ಸಭೆ ಆಯೋಜಿಸಿದೆ. ಪಸ್ಮಾಂದಾ ಮುಸ್ಲಿಮರ ಜತೆ ಬಿಜೆಪಿ ನಡೆಸುತ್ತಿರುವ ಮೊದಲ ಸಭೆ ಇದು, ಹಾಗೇ, ರಾಜಕೀಯ ಪಕ್ಷವೊಂದು ಪಾಸ್ಮಾಂಡಾ ಮುಸ್ಲಿಮರ ಜತೆ ಇದೇ ಮೊದಲ ಬಾರಿಗೆ ಇಂಥ ಸಭೆ ನಡೆಸುತ್ತಿದೆ ಎಂದು ಪಕ್ಷ ಹೇಳಿಕೊಂಡಿದೆ.
ಈ ಸಭೆಗೆ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಮುಖ್ಯ ಅತಿಥಿಯಾಗಿದ್ದು, ‘ಈ ಸಭೆಗೆ ಪಸ್ಮಾಂದಾ ಬುದ್ಧಿಜೀವಿಗಳ ಸಮ್ಮೇಳನ’ ಎಂದು ನಾಮಕರಣ ಮಾಡಲಾಗಿದೆ. ಸಭೆಯಲ್ಲಿ ಉತ್ತರ ಪ್ರದೇಶ ಸಚಿವ ದನೀಶ್ ಅಜಾದ್ ಅನ್ಸಾರಿ ಪಾಲ್ಗೊಳ್ಳುವರು. ಉತ್ತರ ಪ್ರದೇಶ ಸರ್ಕಾರದ ಏಕೈಕ ಮುಸ್ಲಿಂ ಸಚಿವ ಇವರಾಗಿದ್ದು, ಪಸ್ಮಾಂದಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಜಮ್ಮು-ಕಾಶ್ಮೀರದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಿಜೆಪಿ ನಾಯಕ ಗುಲಾಮ್ ಅಲಿ ಖತಾನಾ ಅವರನ್ನು ಸನ್ಮಾನಿಸಲಾಗುವುದು.
ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ‘ಇತರ ಧರ್ಮಗಳಲ್ಲಿರುವ ಹಿಂದುಳಿದ ವರ್ಗದವರನ್ನೂ ನಾವು ತಲುಪಬೇಕು. ಅವರ ಕಷ್ಟ-ಬೇಡಿಕೆಗಳನ್ನು ಆಲಿಸಬೇಕು’ ಎಂದು ಹೇಳಿದ್ದರು. ಇದೀಗ ಪಕ್ಷ ಪ್ರಧಾನಿ ಮೋದಿಯವರ ಮಾತನ್ನು ಕಾರ್ಯರೂಪಕ್ಕೆ ತರುತ್ತಿದೆ. ಇಸ್ಲಾಂನಲ್ಲಿ ಹಿಂದುಳಿದ ವರ್ಗ ಎನ್ನಿಸಿಕೊಂಡ ಪಸ್ಮಾಂದಾ ಜತೆ ಸಭೆ ನಡೆಸಿ, ಅವರ ಕುಂದುಕೊರತೆ ಆಲಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಯಾರು ಈ ಪಸ್ಮಾಂದಾ ಮುಸ್ಲಿಮರು?
ಪಸ್ಮಂದಾಗಳು ಇಸ್ಲಾಂನಲ್ಲಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು. ಇವರು ಬಲಪಂಥೀಯರಾಗಿದ್ದು ದೇಶದಲ್ಲಿ ಒಟ್ಟಾರೆ ಮುಸ್ಲಿಮರಲ್ಲಿ ಇವರ ಜನಸಂಖ್ಯೆ ಶೇ.85. ದೇಶದಲ್ಲಿ ಇಷ್ಟು ಪಸ್ಮಾಂದಾ ಮುಸ್ಲಿಮರು ಇದ್ದರೂ ರಾಜಕೀಯದಲ್ಲಿ ಆ ವರ್ಗಕ್ಕೆ ನಾಯಕತ್ವ ಕೊಡುತ್ತಿಲ್ಲ ಎಂಬ ಬೇಸರ ಪಸ್ಮಾಂದಾಗಳಿಗೆ ಇದೆ.
ಸಂವಿಧಾನದ 341ನೇ ಸೆಕ್ಷನ್ ಪ್ರಕಾರ ತಮ್ಮನ್ನೂ ದಲಿತರು ಎಂದು ಪರಿಗಣಿಸಿ, ಅವರಿಗೆ ನೀಡಲಾಗುವ ಅನುಕೂಲಗಳನ್ನು ಕೊಡಬೇಕು ಎಂಬುದು ಪಸ್ಮಾಂದಾಗಳ ಬಹುದೊಡ್ಡ ಬೇಡಿಕೆ. ಹಾಗೇ, ಧರ್ಮಾಧಾರಿತವಾಗಿ ಇಡೀ ಮುಸ್ಲಿಂ ಸಮುದಾಯಕ್ಕೆ ಯಾವ ಕಾರಣಕ್ಕೂ ಮೀಸಲಾತಿ ಕೊಡಬಾರದು ಎಂದೂ ಆಗ್ರಹಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಗಟ್ಟಿಧ್ವನಿಯಲ್ಲಿ ಆಗ್ರಹಿಸಿದವರಲ್ಲಿ ಈ ಪಸ್ಮಾಂದಾ ಮುಸ್ಲಿಮರೂ ಪ್ರಮುಖರು.
ಇದನ್ನೂ ಓದಿ: ಪಿಎಫ್ಐ ಹಿಟ್ಲಿಸ್ಟ್: ಕೇರಳ ಆರ್ಎಸ್ಎಸ್ನ ಐವರು ಪ್ರಮುಖರಿಗೆ ಕೇಂದ್ರದಿಂದ ವೈ ಶ್ರೇಣಿ ಭದ್ರತೆ