ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸಚಿವ (Madhya Pradesh BJP Minitster)ರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಕುರ್ತಾವನ್ನು ತೆಗೆದು ಬಿಸಾಕಿ, ಬಾಟಲಿಯ ನೀರಿನಿಂದ ಮೈ ತೊಳೆದುಕೊಂಡ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವರಾಚಿ ಗ್ರಾಮದಲ್ಲಿ ನಡೆದಿದೆ. ಈ ವಿಡಿಯೊ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬಿಜೆಪಿ ವಿಕಾಸ ರಥ ಯಾತ್ರೆ ನಿಮಿತ್ತ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರು ಅಶೋಕ ನಗರ ಜಿಲ್ಲೆಯಲ್ಲಿರುವ ತಮ್ಮ ವಿಧಾನಸಭಾ ಕ್ಷೇತ್ರ ಮುಂಗೋಲಿ ವ್ಯಾಪ್ತಿಯಲ್ಲಿರುವ ದೇವರಾಚಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ ಯಾರೋ ಕಿಡಿಗೇಡಿಗಳು ಸಚಿವರ ಮೇಲೆ ಅದೇನೋ ಪೌಡರ್ ಎಸೆದಿದ್ದಾರೆ. ಪುಡಿ ಮೈಮೇಲೆ ಬೀಳುತ್ತಿದ್ದಂತೆ ಸಚಿವರ ಮೈಯೆಲ್ಲ ತುರಿಕೆ ಬರಲು ಶುರುವಾಗಿದೆ. ಅದ್ಯಾವ ಪರಿ ತುರಿಕೆ ಉಂಟಾಯಿತು ಎಂದರೆ, ಸಚಿವರು ಕೂಡಲೇ ತಮ್ಮ ಕುರ್ತಾವನ್ನು ಬಿಚ್ಚಿ, ಕೈ, ಮೈ ತೊಳೆದುಕೊಂಡಿದ್ದಾರೆ.
ಇದನ್ನೂ ಓದಿ: Cow Urine Row | ʼಗೋಮೂತ್ರದಿಂದ ಬಾಯಿ ತೊಳೆಯಿರಿʼ, ವಿವಾದ ಸೃಷ್ಟಿಸಿದ ತ್ರಿಪುರ ಬಿಜೆಪಿ ಸಚಿವ ರತನ್ ಲಾಲ್ ನಾಥ್
ಬಿಜೆಪಿ ವಿಕಾಸ ಯಾತ್ರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಫೆ.12ರಂದು ಚಾಲನೆ ಕೊಟ್ಟಿದ್ದು, ಫೆ.25ರವರೆಗೆ ರಾಜ್ಯದೆಲ್ಲೆಡೆ ನಡೆಯಲಿದೆ. ರಾಜ್ಯಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಮಾಡುವ ಸಲುವಾಗಿ, ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸುವ ಸಲುವಾಗಿ ಈ ಯಾತ್ರೆ ಹಮ್ಮಿಕೊಂಡಿದ್ದಾಗಿ ಪಕ್ಷ ಹೇಳಿದೆ.