Site icon Vistara News

ಲಖನೌಗೆ ಹೊರಟಿದ್ದ ಬಿಜೆಪಿ ಶಾಸಕ ಕಾರಿನಲ್ಲೇ ಮರಣ; ಸಿಎಂ ಯೋಗಿ ಆದಿತ್ಯನಾಥ್​ರಿಂದ ಸಂತಾಪ

Arvind Giri

ಲಖನೌ: ಉತ್ತರ ಪ್ರದೇಶ ಬಿಜೆಪಿ ಶಾಸಕ ಅರವಿಂದ್​ ಗಿರಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಲಖಿಂಪುರ ಖೇರಿ ಜಿಲ್ಲೆಯ ಗೋಲಾ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕರಾಗಿರುವ ಅರವಿಂದ್ ಗಿರಿ (MLA Arvind Giri) ಇಂದು ಸೀತಾಪುರ (ಸಿಧೌಲಿ) ಬಳಿ ಕಾರಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ. ಇವರ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಂತಾಪ ಸೂಚಿಸಿದ್ದು, ‘ಬಿಜೆಪಿ ಶಾಸಕ ಅರವಿಂದ್ ಗಿರಿ ಅವರ ನಿಧನ ನೋವು ತಂದಿದೆ. ಶ್ರೀರಾಮ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅರವಿಂದ್​ ಗಿರಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ’ ಎಂದು ಟ್ವೀಟ್​ ಮಾಡಿದ್ದಾರೆ.

ಅರವಿಂದ್ ಗಿರಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು ಸಮಾಜವಾದಿ ಪಕ್ಷದಿಂದ. 1993ರಲ್ಲಿ ಎಸ್​ಪಿಗೆ ಸೇರ್ಪಡೆಯಾದ ಅವರು 1996ರಲ್ಲಿ ಮೊಟ್ಟ ಮೊದಲಿಗೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣಾ ಕಣಕ್ಕೆ ಇಳಿದರು. 1996, 2002 ಮತ್ತು 2007ರ ವಿಧಾನಸಭೆ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದಿಂದಲೇ ಗೆದ್ದು ಶಾಸಕರಾಗಿದ್ದರು. 2017ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅದೇ ವರ್ಷ ನಡೆದ ಮತ್ತು 2022ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿಯಿಂದ ಗೆದ್ದಿದ್ದರು.

ಅರವಿಂದ್ ಗಿರಿ ಅವರಿಗೆ ಪತ್ನಿ ಸುಧಾ ಗಿರಿ, ಇಬ್ಬರು ಗಂಡು ಮಕ್ಕಳು ಮತ್ತು ಪುತ್ರಿಯರು ಇದ್ದಾರೆ. ಇಂದು ಬೆಳಗ್ಗೆಯೇ ಕಾರಿನಲ್ಲಿ ಲಖನೌಗೆ ತೆರಳುತ್ತಿದ್ದರು. ಆದರೆ ಸೀತಾಪುರದ ಬಳಿ ಹೋಗುತ್ತಿದ್ದಾಗ ಅವರ ಆರೋಗ್ಯ ಒಮ್ಮೆಲೇ ಹದಗೆಟ್ಟಿತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಇದನ್ನೂ ಓದಿ: Conviction Rate | ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯಕ್ಕಿಲ್ಲ ಆಸ್ಪದ, ಶಿಕ್ಷೆ ಪ್ರಮಾಣ ದೇಶದಲ್ಲೇ ಗರಿಷ್ಠ

Exit mobile version