Site icon Vistara News

ಪುದುಚೇರಿ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬಿಜೆಪಿ ಶಾಸಕನ ರಂಪಾಟ; ಅವಮಾನ ಆಯಿತು ಎಂದು ಕೂಗಾಟ

BJP MLA quarrels In convocation in Puducherry

#image_title

ಪುದುಚೇರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಬಿಜೆಪಿ ಶಾಸಕರೊಬ್ಬರು, ವೇದಿಕೆ ಮೇಲೆಯೇ ಆಯೋಜಕರೊಂದಿಗೆ ಜಗಳವಾಡಿದ ಘಟನೆ ನಡೆದಿದೆ. ಪುದುಚೇರಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 29ನೇ ಘಟಿಕೋತ್ಸವ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಲೆಫ್ಟಿನೆಂಟ್​ ಗವರ್ನರ್​ ತಮಿಳಿಸಾಯಿ ಸುಂದರರಾಜನ್ ಮತ್ತು ಮುಖ್ಯಮಂತ್ರಿ ರಂಗಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಇವರಿಬ್ಬರೂ ಆಗಮಿಸಿರಲಿಲ್ಲ. ಗೃಹ ಸಚಿವ ನಮಚಿವಾಯಂ, ಸಚಿವ ಸಾಯಿ ಸರವಣನ್​, ಸಂಸದರಾದ ವೈತಿಲಿಂಗಂ ಮತ್ತು ಸೆಲ್ವ ಗಣಪತಿ, ಶಾಸಕ ಕಲ್ಯಾಣಸುಂದರಂ ಪಾಲ್ಗೊಂಡಿದ್ದರು.

ಇವರಲ್ಲಿ ಬಿಜೆಪಿ ಶಾಸಕ ಕಲ್ಯಾಣಸುಂದರಂ ಅವರು ವೇದಿಕೆ ಮೇಲೆಯೇ ಆಯೋಜಕರ ವಿರುದ್ಧ ತೀವ್ರ ಕಿರಿಕಿರಿಗೊಂಡು ಹರಿಹಾಯ್ದಿದ್ದಾರೆ. ಲೆಫ್ಟಿನೆಂಟ್​ ಗವರ್ನರ್​ ಮತ್ತು ಸಿಎಂ ಇಬ್ಬರೂ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಆಯೋಜಕರು, ಪುದುಚೇರಿಯ ಜವಾಹರಲಾಲ್ ಇನ್​​ಸ್ಟಿಟ್ಯೂಟ್ ಆಫ್​ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ (JIPMER)ಯ ನಿರ್ದೇಶಕ ರಾಕೇಶ್ ಅಗರ್​ವಾಲ್​ ಅವರನ್ನು ಕರೆದರು. ಇದೇ ಕಾರಣಕ್ಕೆ ಅಸಮಾಧಾನಗೊಂಡ ಬಿಜೆಪಿ ಶಾಸಕ ಕಲ್ಯಾಣಸುಂದರಂ, ‘ವೇದಿಕೆ ಮೇಲೆ ಸಚಿವರು ಇದ್ದಾರೆ, ಇನ್ನಿತರ ಗಣ್ಯರು ಇದ್ದಾರೆ. ಹೀಗಿರುವಾಗ ಪದವಿ ಪ್ರಮಾಣ ಪತ್ರ ನೀಡಲು ನೀವು JIPMER ನಿರ್ದೇಶಕನನ್ನು ಕರೆದಿದ್ದೇಕೆ. ಇದು ಇಲ್ಲಿರುವ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರಿಗೆ ಅವಮಾನ ಮಾಡಿದಂತೆ. ಹೀಗೆ ಇವರನ್ನೆಲ್ಲ ಅವಮಾನಿಸಲು ನೀವ್ಯಾರು?’ ಎಂದು ಕೋಪದಿಂದ ಕೂಗಾಡಿದ್ದಾರೆ.

ಇದನ್ನೂ ಓದಿ: ಪುದುಚೇರಿಯಲ್ಲಿ ದಿನೇಶ್‌ ಗುಂಡೂರಾವ್‌ಗೆ ಕಾಂಗ್ರೆಸ್‌ ಕಾರ್ಯಕರ್ತರ ಮುತ್ತಿಗೆ; ಕಾರಿಗೆ ಹಾನಿ

ಇನ್ನು ಒಂದೆಡೆ ಶಾಸಕರು ಹೀಗೆ ಕೂಗಾಡುತ್ತಿದ್ದರೆ, ಇನ್ನೊಂದೆಡೆ JIPMER ನಿರ್ದೇಶಕರು ತಮ್ಮ ಪಾಡಿಗೆ ತಾವು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದ್ದಾರೆ. ಬಳಿಕ ಗೃಹ ಸಚಿವ ನಮಚಿವಾಯಂ ಅವರ ಬಳಿ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿಸಲಾಗಿದೆ.

Exit mobile version