Site icon Vistara News

Anil Firojiya | ಸಚಿವ ನಿತಿನ್​ ಗಡ್ಕರಿ ಸವಾಲು ಸ್ವೀಕರಿಸಿ, 32 ಕೆಜಿ ತೂಕ ಕಳೆದುಕೊಂಡ ಬಿಜೆಪಿ ಸಂಸದ

Anil Firojiya And Nitin Gadkari

ನವ ದೆಹಲಿ: ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಸವಾಲು ಸ್ವೀಕರಿಸಿದ್ದ ಉಜ್ಜಯಿನಿ ಬಿಜೆಪಿ ಸಂಸದ ಅನಿಲ್​ ಫಿರೋಜಿಯಾ ಅವರು ತಾವೀಗ ಒಟ್ಟು 32 ಕೆಜಿ ತೂಕ ಇಳಿಸಿಕೊಂಡಿದ್ದಾಗಿ ಹೇಳಿದ್ದಾರೆ. ಈ ಅನಿಲ್ ಫಿರೋಜಿಯಾ ಒಟ್ಟಾರೆ 127 ಕೆಜಿ ಇದ್ದರು. 2022ರ ಫೆಬ್ರವರಿಯಲ್ಲಿ ಒಮ್ಮೆ ನಿತಿನ್​ ಗಡ್ಕರಿಯವರನ್ನು ಭೇಟಿಯಾಗಿದ್ದಾಗ, ಅನಿಲ್ ತೂಕದ ಬಗ್ಗೆ ಗಡ್ಕರಿ ಮಾತನಾಡಿದ್ದರು. ‘ನಿಮ್ಮ ತೂಕ ತುಂಬ ಹೆಚ್ಚಾಯಿತು. ನೀವು ತೂಕ ಇಳಿಸಿಕೊಳ್ಳಿ. ನೀವು ಇಳಿಸುವ ಪ್ರತಿ ಕೆಜಿಗೆ ನಮ್ಮ ಸಚಿವಾಲಯದಿಂದ 1000 ಕೋಟಿ ರೂಪಾಯಿ ಕೊಡುತ್ತೇನೆ. ಒಟ್ಟಾರೆ ಎಷ್ಟು ಕೆಜಿ ಇಳಿಸುತ್ತೀರೋ, ಅಷ್ಟು ಸಾವಿರ ಕೋಟಿ ರೂಪಾಯಿಯನ್ನು ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಸಚಿವಾಲಯದಿಂದ ಬಿಡುಗಡೆ ಮಾಡುತ್ತೇವೆ. ಇದರಿಂದ ನಿಮ್ಮ ಕ್ಷೇತ್ರದಲ್ಲೂ ರಸ್ತೆ-ಹೆದ್ದಾರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಳ್ಳಬಹುದು’ ಎಂದು ಹೇಳಿದ್ದರು. ಆಗಿನಿಂದಲೂ ಅನಿಲ್ ಫಿರೋಜಿಯಾ ತಮ್ಮ ತೂಕ ನಷ್ಟ ಮಾಡಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಲೇ ಇದ್ದರು.

ಈ ವರ್ಷ ಜೂನ್​​ ತಿಂಗಳು ಎನ್ನುವಷ್ಟರಲ್ಲಿಯೇ ಅನಿಲ್​ ಫಿರೋಜಿಯಾ 15 ಕೆಜಿ ತೂಕ ಕಳೆದುಕೊಂಡಿದ್ದರು. ಈಗ ಇನ್ನೂ 17 ಕೆಜಿ ತೂಕ ನಷ್ಟವಾಗಿದ್ದು, ಒಟ್ಟಾರೆ 32 ಕೆಜಿ ಕಳೆದುಕೊಂಡಿದ್ದಾರೆ. ‘ಹಾಗೇ, ನಾನೆಷ್ಟು ಕೆಜಿ ತೂಕ ಕಳೆದುಕೊಂಡಿದ್ದೇನೋ, ಅಷ್ಟು ಸಾವಿರ ಕೋಟಿ ರೂಪಾಯಿಯನ್ನು ನನ್ನ ಕ್ಷೇತ್ರಕ್ಕೆ ಕೊಡುವುದಾಗಿ ನಿತಿನ್​ ಗಡ್ಕರಿ ತಿಳಿಸಿದ್ದಾರೆ. ಸದ್ಯ 32 ಕೆಜಿ ಲಾಸ್​ ಆಗಿದೆ. ನಿತಿನ್​ ಗಡ್ಕರಿ ಈಗಾಗಲೇ ನನ್ನ ಕ್ಷೇತ್ರಕ್ಕೆ 2300 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಗಂತ ನಾನು ಇಲ್ಲಿಗೇ ನಿಲ್ಲಿಸುವುದಿಲ್ಲ. ಇನ್ನೂ ತೂಕ ಇಳಿಕೆ ಮಾಡಿಕೊಳ್ಳುತ್ತೇನೆ. ನನ್ನ ಕ್ಷೇತ್ರಕ್ಕೆ ಜಾಸ್ತಿ ಹಣ ತರುತ್ತೇನೆ ಎಂದು ಅನಿಲ್​ ಫಿರೋಜಿಯಾ ಹೇಳಿದ್ದಾರೆ.

ತೂಕ ನಷ್ಟ ಹೇಗೆ?
32 ಕೆಜಿಗಳಷ್ಟು ತೂಕವನ್ನು ಹೇಗೆ ಕಳೆದುಕೊಂಡೆ ಎಂಬುದನ್ನೂ ಅನಿಲ್​ ಫಿರೋಜಿಯಾ ತಿಳಿಸಿದ್ದಾರೆ. ಮುಂಜಾನೆ 5.30ರಿಂದ ನನ್ನ ಯೋಗಾಭ್ಯಾಸ, ಎರೋಬಿಕ್ಸ್​ಗಳು ಪ್ರಾರಂಭವಾಗುತ್ತಿದ್ದವು. ಅದಾದ ಮೇಲೆ ರನ್ನಿಂಗ್​ ಮಾಡುತ್ತಿದ್ದೆ. ಹಾಗೇ, ಡಯೆಟ್​ ಕೂಡ ಅಳವಡಿಸಿಕೊಂಡಿದ್ದೆ. ಸಲಾಡ್​, ಹಸಿರು ತರಕಾರಿಗಳು, ಇತರ ಆಯುರ್ವೇದಿಕ್​ ಆಹಾರಗಳನ್ನು ನನ್ನ ನಿತ್ಯದ ಊಟ-ತಿಂಡಿಯಲ್ಲಿ ಅಳವಡಿಸಿಕೊಂಡಿದ್ದೆ. ರಾತ್ರಿಯ ಊಟಕ್ಕೆ ಧಾನ್ಯಗಳ ಹಿಟ್ಟಿನಿಂದ ತಯಾರಿಸಿದ ತಿನಿಸನ್ನೇ ಸೇವಿಸುತ್ತಿದ್ದೆ. ಕ್ಯಾರೆಟ್​ ಸೂಪ್​, ಡ್ರೈಫ್ರೂಟ್ಸ್​​ಗಳನ್ನು ತಿನ್ನುತ್ತಿದ್ದೆ ಎಂದೂ ತಿಳಿಸಿದ್ದಾರೆ. ಹಾಗಂತ ಇದನ್ನೆಲ್ಲ ಅವರು ವೈದ್ಯರು, ಆಹಾರ ತಜ್ಞರ ಸೂಚನೆ ಮೇರೆಗೇ ಮಾಡಿದ್ದಾರೆ.

ಇದನ್ನೂ ಓದಿ: ಅವೈಜ್ಞಾನಿಕ ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಸರಿಪಡಿಸಿ; ನಿತಿನ್ ಗಡ್ಕರಿಗೆ ಡಿಕೆ ಬದರ್ಸ್‌ ಮನವಿ

Exit mobile version