Site icon Vistara News

ಪಶ್ಚಿಮ ಬಂಗಾಳ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರು; ತಡೆದ ಪೊಲೀಸರ ಜತೆ ಸಂಘರ್ಷ

West Bengal BJP

ಕೋಲ್ಕತ್ತ: ಇಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ‘ನಬಾನ್ನ ಚಲೋ’ (ನಬಾನ್​ ಎಂದರೆ ಪಶ್ಚಿಮ ಬಂಗಾಳ ರಾಜ್ಯ ಸಚಿವಾಲಯದ ಕಟ್ಟಡ-ಇದು ಹೌರಾಹ್​ನಲ್ಲಿದೆ) ಹಮ್ಮಿಕೊಂಡಿದ್ದು, ಅದನ್ನು ಪೊಲೀಸರು ತಡೆಯಲು ಪ್ರಯತ್ನಪಟ್ಟ ವೇಳೆ ದೊಡ್ಡ ಗಲಾಟೆಯೇ ಆಗಿದೆ. ರಾಣಿಗಂಜ್​ ರೈಲ್ವೇ ಸ್ಟೇಶನ್​ ಹೊರಗೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಇದಾದ ಬಳಿಕ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ನಾವು ಅನುಮತಿ ನೀಡದೆ ಇದ್ದರೂ, ಬಿಜೆಪಿಯವರು ಅಭಿಯಾನಕ್ಕೆ ಮುಂದಾಗಿದ್ದಕ್ಕೇ, ಅವರನ್ನು ತಡೆದಿದ್ದೇವೆ’ ಎಂದು ಪೊಲಿಸರು ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸರ್ಕಾರವೇ ಎಲ್ಲಕ್ಕೂ ಕುಮ್ಮಕ್ಕು ನೀಡುತ್ತಿದೆ. ಸರ್ಕಾರದಲ್ಲಿ ಭ್ರಷ್ಟರೇ ತುಂಬಿ ಹೋಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇಂದು ನಬನ್ನಾ ಚಲೋ ಹಮ್ಮಿಕೊಂಡಿತ್ತು. ರಾಜ್ಯದ ವಿವಿಧ ಭಾಗಗಳಿಂದ ಅನೇಕ ಕಾರ್ಯಕರ್ತರು ರೈಲು, ಬಸ್​​ ಮತ್ತಿತರ ವಾಹನಗಳ ಮೂಲಕ ಕೋಲ್ಕತ್ತಾಕ್ಕೆ ತೆರಳಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದರೂ ಪ್ರಯೋಜನವಾಗಲಿಲ್ಲ. ರಾಣಿಗಂಜ್​ ಸ್ಟೇಶನ್​ ಹೊರಗಡೆ ಗಲಾಟೆ ನಡೆದಿದೆ. ಅಷ್ಟೇ ಅಲ್ಲ, ದುರ್ಗಾಪುರ ರೈಲ್ವೆ ಸ್ಟೇಶನ್​ ಹೊರಗೂ ಕೂಡ ಸುಮಾರು 20 ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದು, ವಶಕ್ಕೆ ಪಡೆದಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಸುವೇಂದು ಅಧಿಕಾರಿ ಕಿಡಿ
ಪಶ್ಚಿಮ ಬಂಗಾಳ ರಾಜ್ಯ ಉತ್ತರ ಕೊರಿಯಾವಾಗಿ ಬದಲಾಗುತ್ತಿದೆ. ಇಲ್ಲಿ ಪ್ರತಿಭಟನೆ ಮಾಡುವ ಹಕ್ಕೂ ಇಲ್ಲದಂತಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಮ್ಮ ಪಕ್ಷದ ಕಾರ್ಯಕರ್ತರು ಸಚಿವಾಲಯಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ ಅದಕ್ಕೂ ಅವಕಾಶ ಕೊಡಲಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಇನ್ನೊಂದೆಡೆ ಪೊಲೀಸರ ಕಾರ್ಯವನ್ನು ಟಿಎಂಸಿ ನಾಯಕ ಮನೋಜಿತ್​ ಮಂಡಲ್​ ಸಮರ್ಥನೆ ಮಾಡಿಕೊಂಡಿದ್ದಾರೆ. ‘ಬಿಜೆಪಿಯದ್ದು ಇಲ್ಲಿ ಅನಗತ್ಯ ಪ್ರತಿಭಟನೆ. ಅಷ್ಟು ಪ್ರತಿಭಟನೆ ಮಾಡಬೇಕು ಎಂದಾದರೆ ಅವರು ಬೆಲೆ ಏರಿಕೆ, ಹಣದುಬ್ಬರದ ವಿರೋಧಿಸಿ ಮಾಡಲಿ. ಅದರಲ್ಲಿ ನ್ಯಾಯವಿದೆ’ ಎಂದಿದ್ದಾರೆ.

ಇದನ್ನೂ ಓದಿ: Coal Scam Case | ಪಶ್ಚಿಮ ಬಂಗಾಳದ ಕಾನೂನು ಸಚಿವನಿಗೆ ಸಂಕಷ್ಟ; ಐದು ನಿವಾಸಗಳ ಮೇಲೆ ಸಿಬಿಐ ರೇಡ್​

Exit mobile version