Site icon Vistara News

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾದ ಬಿಜೆಪಿ; ಏಕನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿ ಹುದ್ದೆ ಆಫರ್‌

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಅತಂತ್ರವಾಗಿದೆ. ೧೬ ಮಂದಿ ಬಂಡಾಯ ಶಾಸಕರ ಅನರ್ಹತೆ ನೋಟಿಸ್‌ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜು.11ರವರೆಗೆ ಮುಂದೂಡಿದೆ. ಇದೇ ಹೊತ್ತಲ್ಲಿ ಬಿಜೆಪಿ ಫುಲ್‌ ಅಲರ್ಟ್‌ ಆಗಿದ್ದು, ಸರ್ಕಾರ ರಚನೆಗೆ ಮುಂದಾಗಿದೆ. ಶಿವಸೇನೆ ಬಂಡಾಯ ಶಾಸಕ ಏಕನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿ ಹುದ್ದೆಯ ಆಫರ್‌ ಕೊಡುವ ಮೂಲಕ ಮೈತ್ರಿಗೆ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಬಿಜೆಪಿ ಬಹುಮತ ಇಲ್ಲದೆ ಇದ್ದರೂ ಅವಸರದಲ್ಲಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿತ್ತು. ಎನ್‌ಸಿಪಿಯ ಅಜಿತ್‌ ಪವಾರ್‌ ಸದ್ದಿಲ್ಲದೆ ಬಿಜೆಪಿಗೆ ಬೆಂಬಲ ಕೊಟ್ಟುಬಿಟ್ಟಿದ್ದರು. ಆದರೆ ಆ ಸರ್ಕಾರ ವಾರವೂ ಉಳಿಯಲಿಲ್ಲ. ಅಜಿತ್‌ ಪವಾರ್‌ ತಾವು ಬಿಜೆಪಿಗೆ ಕೊಟ್ಟಿದ್ದ ಬೆಂಬಲವನ್ನು ಅಷ್ಟೇ ವೇಗವಾಗಿ ವಾಪಸ್‌ ಪಡೆದಿದ್ದರು. ಇದೊಂದು ಸರ್ಕಾರ ರಚನೆಯ ಪ್ರಹಸನದಂತೆ ಆಗಿತ್ತು.

ʼಈಗ ಬಿಜೆಪಿ ಏಕನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಾಗಿ ಹೇಳಿದೆ. ಅಷ್ಟೇ ಅಲ್ಲ, ಈ ಬಂಡಾಯ ಶಾಸಕರೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದರೆ ಸುಮಾರು ೧೨ ಮಂತ್ರಿ ಸ್ಥಾನವನ್ನು ಅವರ ಬಣಕ್ಕೆ ನೀಡಲು ಬಿಜೆಪಿ ನಿರ್ಧರಿಸಿದೆ. ೨೦೧೯ರಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಮಾತುಕತೆ ನಡೆಯುವಾಗಲೂ ಇಷ್ಟೇ ಸಚಿವ ಸ್ಥಾನಗಳನ್ನು ಶಿವಸೇನೆಗೆ ನೀಡಲು ನಿರ್ಧರಿಸಲಾಗಿತ್ತುʼ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾಗಿ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ʼಹಾಗಿದ್ದಾಗ್ಯೂ ಸರ್ಕಾರ ರಚನೆ ಮಾಡಲೇಬೇಕು ಎಂಬ ತೀವ್ರ ಹಪಹಪಿ ಬಿಜೆಪಿಗೆ ಇಲ್ಲ. ಒಮ್ಮೆ ಸರ್ಕಾರ ಮಾಡಿದ್ದೇ ಆದಲ್ಲಿ, 43 ಶಿವಸೇನೆ ಶಾಸಕರು ಇರುವ ಶಿಂಧೆ ಬಣಕ್ಕೆ, ಶೇ.25ಕ್ಕಿಂತ ಹೆಚ್ಚಿನ ಪಾಲು ಸಿಗುವುದಿಲ್ಲ. ಲೋಕೋಪಯೋಗಿ, ಕಂದಾಯ, ನಗರಾಭಿವೃದ್ಧಿ ಹೊರತು ಇನ್ಯಾವುದೇ ಪ್ರಮುಖ ಇಲಾಖೆಗಳನ್ನೂ ಅವರಿಗೆ ಕೊಡುವುದಿಲ್ಲ. ಶಿಂಧೆ ಬಣದಲ್ಲಿ 9 ಸಚಿವರು ಇದ್ದಾರೆ. ಅದರಲ್ಲಿ ಆರು ಮಂದಿ ವಿವಿಧ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳು. ಅವರೆಲ್ಲರೂ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರದಲ್ಲೂ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆʼ ಎಂದೂ ಅನಾಮಧೇಯ ಬಿಜೆಪಿ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ಇಂದು ಮಹಾರಾಷ್ಟ್ರ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದಾರೆ. ಅದರ ಬೆನ್ನಲ್ಲೇ ಇಂಥದ್ದೊಂದು ಸುದ್ದಿ ಹೊರಬಿದ್ದಿದೆ. ಇನ್ನೊಂದೆಡೆ ಏಕನಾಥ್‌ ಶಿಂಧೆ ನಾಳೆ (ಜೂ.29) ಮುಂಬೈಗೆ ವಾಪಸ್‌ ಆಗಲಿದ್ದಾರೆ. ಇವರೆಲ್ಲ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಬೆಂಬಲ ಪಡೆದು ಹೊಸ ಸರ್ಕಾರ ರಚನೆಗೆ ಬಿಜೆಪಿ ಸಜ್ಜು

Exit mobile version