ನವ ದೆಹಲಿ: ಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಸಾಂಸ್ಥಿಕವಾಗಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಬಿಜೆಪಿ ಪಕ್ಷ ಇಂದು ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ ಘೋಷಣೆ ಮಾಡಿದೆ. ಇಷ್ಟು ದಿನ ಅಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ಬದಲು, ಈಗ ಬೇರೆಯವರನ್ನು ನೇಮಕ ಮಾಡಲಾಗಿದೆ.
ರಾಜಸ್ಥಾನದಲ್ಲಿ ಇದೇ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯಾಗಿದೆ. ಇಷ್ಟು ದಿನ ರಾಜಸ್ಥಾನದಲ್ಲಿ ಸತೀಶ್ ಪೂನಿಯಾ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದರು. ಈಗ ಸಿಪಿ ಜೋಶಿ ಅವರು ಹುದ್ದೆಗೆ ನೇಮಕಗೊಂಡಿದ್ದಾರೆ. ಹಾಗೇ, ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವೀರೇಂದ್ರ ಸಚ್ದೇವಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಡಿಶಾದಲ್ಲಿ ಕೂಡ ರಾಜ್ಯಾಧ್ಯಕ್ಷರ ಬದಲಾವಣೆಯಾಗಿದೆ. ಇಷ್ಟು ದಿನ ಇದ್ದ ಸಮೀರ್ ಮೊಹಂತಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಈಗ ಮನಮೋಹನ್ ಸಮಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದಾರೆ. ಬಿಹಾರದಲ್ಲಿ ಜೆಡಿಯು ಮೈತ್ರಿ ಕಳೆದುಕೊಂಡಿದ್ದರಿಂದ ಬಿಜೆಪಿ ಅಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ. ಅಲ್ಲಿ ಇಷ್ಟುದಿನ ಸಂಜಯ್ ಜೈಸ್ವಾಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷನ ಹುದ್ದೆಯಲ್ಲಿ ಇದ್ದರು. ಅವರ ಬದಲಿಗೆ ಈಗ ಸಮರ್ಥ್ ಚೌಧರಿಯವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: Karnataka Election: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನದಲ್ಲಿ ತೊಡಗಿದೆ. ಆಂತರಿಕವಾಗಿ ಕಲಹ ಇದ್ದಲ್ಲೆಲ್ಲ, ಅದನ್ನು ಮೊದಲು ಸರಿಪಡಿಸಿ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಲು ಬಿಜೆಪಿ ಹೈಕಮಾಂಡ್ ಯತ್ನ ಮಾಡುತ್ತಿದೆ. ಈಗ ಇವಿಷ್ಟೂ ರಾಜ್ಯಗಳಲ್ಲೂ ಇಷ್ಟು ದಿನ ಇದ್ದ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಪಕ್ಷದೊಳಗೇ ಸ್ವಲ್ಪ ಮಟ್ಟಿಗೆ ಅಸಮಾಧಾನವೂ ಕೇಳಿಬಂದಿತ್ತು ಎಂದೂ ವರದಿಯಾಗಿದೆ.