Site icon Vistara News

ಅರವಿಂದ್​ ಕೇಜ್ರಿವಾಲ್​ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ: ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಾರಿಂದ ಗಂಭೀರ ಆರೋಪ

Delhi DCM Manish Sisodia Arrested In Liquor Policy Scam

ಮನೀಷ್‌ ಸಿಸೋಡಿಯಾ

ನವ ದೆಹಲಿ: ದೆಹಲಿ ಉಪಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ನಾಯಕ (AAP Leader) ಮನೀಶ್​ ಸಿಸೋಡಿಯಾ ಅವರು ಬಿಜೆಪಿ ವಿರುದ್ಧ ತುಂಬ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ. ‘ಬಿಜೆಪಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ್ತು ಗುಜರಾತ್​ ವಿಧಾನಸಭೆಯಲ್ಲಿ ಆಪ್​ ವಿರುದ್ಧ ಸೋಲುವ ಭಯವ ಶುರುವಾಗಿದೆ. ಹೀಗಾಗಿ ಬಿಜೆಪಿಯವರು ನಮ್ಮ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆ’ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ್ತು ಗುಜರಾತ್​ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಮತ್ತು ಬಿಜೆಪಿ ಮಧ್ಯೆ ಹಣಾಹಣಿ ಶುರುವಾಗಿದೆ. ಪರಸ್ಪರರ ವಿರುದ್ಧ ಆರೋಪ ಮಾಡುತ್ತ, ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಹೀಗಿರುವಾಗ ಬಿಜೆಪಿ ಸಂಸದ ಮನೋಜ್​ ತಿವಾರಿ ಟ್ವೀಟ್​ ಮಾಡಿ, ‘ಆಮ್​ ಆದ್ಮಿ ಪಕ್ಷದವರ ನಿರಂತರ ಭ್ರಷ್ಟಾಚಾರ, ಜೈಲಲ್ಲಿ ರೇಪಿಸ್ಟ್​​ನಿಂದ ಮಸಾಜ್​ ಮಾಡಿಸಿಕೊಳ್ಳುತ್ತಿರುವುದನ್ನೆಲ್ಲ ನೋಡಿದ ಮೇಲೆ ಜನರು ಆ ಪಕ್ಷದ ಮೇಲೆ ಕೋಪಗೊಂಡಿದ್ದಾರೆ. ಆಪ್​ ಶಾಸಕ ಗುಲಾಬ್​ ಸಿಂಗ್​ ಯಾದವ್​​ಗೆ ಅವರದ್ದೇ ಪಕ್ಷದ ಕಾರ್ಯಕರ್ತರು ಇತ್ತೀಚೆಗೆ ಥಳಿಸಿದ್ದರು. ಹೀಗಿರುವಾಗ ನಮಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸುರಕ್ಷತೆ ಬಗ್ಗೆಯೂ ಕಳವಳ ಆಗುತ್ತಿದೆ. ಅವರಿಗೂ ಇಂಥ ಸನ್ನಿವೇಶ ಎದುರಾಗದೆ ಇರಲಿ, ಅವರ ಮೇಲೆ ಹಲ್ಲೆ ಆಗದೆ ಇರಲಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಮನೋಜ್​ ತಿವಾರಿ ಸುದ್ದಿಗೋಷ್ಠಿಯಲ್ಲಿ ಕೂಡ ಇದೇ ಮಾತುಗಳನ್ನು ಆಡಿದ್ದರು.

ಅದಕ್ಕೆ ಪ್ರತಿಯಾಗಿ ಟ್ವೀಟ್​ ಮಾಡಿದ ಮನೀಶ್​ ಸಿಸೋಡಿಯಾ ‘ಅರವಿಂದ್ ಕೇಜ್ರಿವಾಲ್​ ಮೇಲೆ ಹಲ್ಲೆ ನಡೆಸುವಂತೆ ಮನೋಜ್​ ತಿವಾರಿ ಅವರು ತಮ್ಮ ಗೂಂಡಾಗಳಿಗೆ ಬಹಿರಂಗವಾಗಿಯೇ ಕರೆ ನೀಡುತ್ತಿದ್ದಾರೆ. ಬಿಜೆಪಿಯವರಿಗೆ ಗುಜರಾತ್​ ವಿಧಾನಸಭೆ ಚುನಾವಣೆ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಹೀಗಾಗಿ ಕೇಜ್ರಿವಾಲ್​ರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ. ನಾವು ಅವರ ಕ್ಷುಲ್ಲಕ ರಾಜಕಾರಣಕ್ಕೆ ಹೆದರುವುದಿಲ್ಲ’ ಎಂದು ಹೇಳಿದ್ದಾರೆ.

ಮನೀಶ್​ ಸಿಸೋಡಿಯಾ ಟ್ವೀಟ್​ಗೆ ಬಿಜೆಪಿ ದೆಹಲಿ ವಕ್ತಾರ ಪ್ರವೀಣ್​ ಶಂಕರ್​ ಕಪೂರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಪಕ್ಷದವರೇ ನಿಮ್ಮನ್ನು ಕಳ್ಳರು ಎಂದು ಕರೆಯುತ್ತಿದ್ದಾರೆ. ನಿಮ್ಮ ಪಕ್ಷದ ಶಾಸಕರನ್ನು ಸಾರ್ವಜನಿಕರೇ ಹಿಡಿದು ಥಳಿಸುತ್ತಿದ್ದಾರೆ. ದೆಹಲಿ, ಗುಜರಾತ್​ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಿಮ್ಮ ಸೋಲು ಖಚಿತ’ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ ಪಂಜಾಬ್​ ವಿಧಾನಸಭೆ ಚುನಾವಣೆ ಹೊತ್ತಲ್ಲೂ ಸಿಸೋಡಿಯಾ ಇದೇ ಆರೋಪ ಮಾಡಿದ್ದರು. ಬಿಜೆಪಿಗೆ ಪಂಜಾಬ್​ನಲ್ಲಿ ಸೋಲುವ ಭಯ ಶುರುವಾಗಿದೆ. ಹಾಗಾಗಿ ಅವರು ಕೇಜ್ರಿವಾಲ್​ರನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಿಜೆಪಿಯಲ್ಲೇ ಇದ್ದುಕೊಂಡು ಆಪ್​​ಗಾಗಿ ಕೆಲಸ ಮಾಡಿ; ಕಾರ್ಯಕರ್ತರಿಗೆ ಕರೆ ನೀಡಿದ ಅರವಿಂದ್ ಕೇಜ್ರಿವಾಲ್​

Exit mobile version