ನವ ದೆಹಲಿ: ಇಂದು ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಬಕಾರಿ ನೀತಿ (Delhi Liquor Policy)ಅಕ್ರಮದಲ್ಲಿ ಆಮ್ ಆದ್ಮಿ ಪಕ್ಷ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು/ಕಾರ್ಯಕರ್ತರು, ಇಂದು ಆಪ್ ಪ್ರಧಾನ ಕಚೇರಿ ಎದುರಲ್ಲೇ ‘ಅರವಿಂದ್ ಕೇಜ್ರಿವಾಲ್ ಕಳ್ಳ’ ಎಂದು ದೊಡ್ಡದಾಗಿ ಕೂಗುತ್ತ ಪ್ರತಿಭಟನೆ ನಡೆಸಿದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನೆಲ್ಲ ಹಾರಿ ಅವ್ಯವಸ್ಥೆ ಸೃಷ್ಟಿಸಿದರು.
ದೆಹಲಿಯಲ್ಲಿ ಆಪ್ ಸರ್ಕಾರ 2021-22ನೇ ಸಾಲಿನಲ್ಲಿ ನೂತನ ಅಬಕಾರಿ ನೀತಿಯನ್ನು ರಚಿಸಿತ್ತು. ಅದರಡಿಯಲ್ಲಿ ಸುಮಾರು 849 ಖಾಸಗಿ ವ್ಯಾಪಾರಿಗಳಿಗೆ ಪರವಾನಗಿ ನೀಡಲಾಗಿತ್ತು. ಹೀಗೆ ಪರವಾನಗಿ ನೀಡುವಾಗ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಆಗಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಆರೋಪಿಸಿದ್ದರು. ಹಾಗೇ, ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರವನ್ನೂ ಬರೆದಿದ್ದರು. ಅಬಕಾರಿ ಇಲಾಖೆ ಉಸ್ತುವಾರಿ ಹೊತ್ತಿದ್ದ ಮನೀಶ್ ಸಿಸೋಡಿಯಾ ಮೇಲೆಯೇ ಅವರು ನೇರ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಈ ಕೇಸ್ನ್ನು ಇ.ಡಿ. ಮತ್ತು ಸಿಬಿಐಗಳು ತನಿಖೆಗೆ ಕೈಗೆತ್ತಿಕೊಂಡಿವೆ. ಮನೀಶ್ ಸಿಸೋಡಿಯಾ ಮನೆ, ಕಚೇರಿಗಳ ಮೇಲೆ ತನಿಖಾದಳಗಳ ದಾಳಿಯಾಗಿದೆ. ಅವರ ಆಪ್ತರು, ಹಲವು ಮದ್ಯದ ವ್ಯಾಪಾರಿಗಳ ಬಂಧನವೂ ಆಗಿದೆ.
ಇದನ್ನೂ ಓದಿ: Kejriwal Government | ಅಬಕಾರಿ ನೀತಿ ಹಗರಣ: ವಕೀಲರಿಗೆಂದೇ 25 ಕೋಟಿಗೂ ಹೆಚ್ಚು ವೆಚ್ಚ ಮಾಡಿದ ಕೇಜ್ರಿವಾಲ್ ಸರ್ಕಾರ!
ದೆಹಲಿ ಅಬಕಾರಿ ನೀತಿ ಅನುಷ್ಠಾನದ ವೇಳೆ ಭ್ರಷ್ಟಾಚಾರ ಆಗಿದೆ ಎಂದು ಇ.ಡಿ. ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಹಾಗೇ, ಈ ಯೋಜನೆಯಿಂದ ಅಕ್ರಮವಾಗಿ ಸಂಗ್ರಹವಾಗಿದ್ದ ಸುಮಾರು 100 ಕೋಟಿ ರೂಪಾಯಿಯನ್ನು ಆಮ್ ಆದ್ಮಿ ಪಕ್ಷ ಗೋವಾ ವಿಧಾನಸಭೆ ಚುನಾವಣೆಗೆ ಬಳಸಿಕೊಂಡಿದೆ ಎಂದೂ ಹೇಳಿದೆ. ಇ.ಡಿ.ಯ ಈ ವರದಿ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಇಷ್ಟು ದೊಡ್ಡಮಟ್ಟದ ಭ್ರಷ್ಟಾಚಾರ ಎಸಗಿದ ಅರವಿಂದ್ ಕೇಜ್ರಿವಾಲ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸುತ್ತಿದ್ದಾರೆ.