Site icon Vistara News

ಪ್ರಧಾನಿ ಮೋದಿ ಭೇಟಿ ಮಾಡಿದ ಜಗನ್​ ರೆಡ್ಡಿ, ಚಂದ್ರಬಾಬು ನಾಯ್ಡು; ಮೈತ್ರಿ ಬಗ್ಗೆ ಬಿಜೆಪಿ ನಾಯಕ ಹೇಳಿದ್ದೇನು?

BJP ruled out an electoral alliance with the YSRC And TDP In Andhra Pradesh

ನವ ದೆಹಲಿ: ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ, ವೈಎಸ್​ಆರ್​ಸಿ ಪಕ್ಷದ ಮುಖ್ಯಸ್ಥ ಜಗನ್​ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಜಗನ್​ ರೆಡ್ಡಿಗೂ ಮೊದಲು ಆಂಧ್ರ ಪ್ರತಿಪಕ್ಷ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೂಡ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಚಂದ್ರಬಾಬು ನಾಯ್ಡು 2018ರಲ್ಲಿ ಎನ್​​ಡಿಎ ಒಕ್ಕೂಟ ತೊರೆದ ಬಳಿಕ ಇವತ್ತಿನವರೆಗೆ ಮೋದಿ ಭೇಟಿ ಮಾಡಿರಲಿಲ್ಲ.

ಹೀಗೆ ಆಂಧ್ರದ ಇಬ್ಬರೂ ನಾಯಕರು ಬೇರೆಬೇರೆ ಕಾರಣಕ್ಕೆ ಈ ಸಲ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಆದರೆ ರಾಜಕೀಯ ವಲಯದಲ್ಲಿ ಬೇರೆಯದ್ದೇ ಚರ್ಚೆ ಶುರುವಾಗಿತ್ತು. ಆಂಧ್ರಪ್ರದೇಶದಲ್ಲಿ ವೈಎಸ್​ಆರ್ ಕಾಂಗ್ರೆಸ್​ ಮತ್ತು ಬಿಜೆಪಿ ಮೈತ್ರಿಗೆ ಸಿದ್ಧತೆ ನಡೆಸುತ್ತಿವೆ ಎಂದು ಒಂದು ವರ್ಗ ಹೇಳಿದರೆ, ಇಲ್ಲ ಚಂದ್ರಬಾಬು ನಾಯ್ಡು ಮತ್ತೊಮ್ಮೆ ಎನ್​ಡಿಎ ಒಕ್ಕೂಟ ಸೇರುವ ಪ್ರಯತ್ನದಲ್ಲಿದ್ದಾರೆ ಎಂಬುದಾಗಿ ಮತ್ತೊಂದು ವರ್ಗ ಹೇಳಿತ್ತು. ಈ ಬಗ್ಗೆ ಕೆಲವು ರಾಷ್ಟ್ರೀಯ ಮಾಧ್ಯಮಗಳೂ ವರದಿ ಮಾಡಿವೆ. ಒಟ್ಟಿನಲ್ಲಿ ಆಂಧ್ರಪ್ರದೇಶ ರಾಜಕಾರಣ, ಇಬ್ಬರು ನಾಯಕರ ಮೋದಿ ಭೇಟಿ, ಬಿಜೆಪಿ ಮುಂದಿನ ನಡೆ ಬಗ್ಗೆ ರಾಜಕೀಯವ ವಲಯದಲ್ಲಿ ಹಲವು ರೂಪದಲ್ಲಿ ವಿಶ್ಲೇಷಣೆಗಳು ಶುರುವಾಗಿದ್ದವು.

ಹೀಗಿರುವಾಗ ಆಂಧ್ರಪ್ರದೇಶದ ಬಿಜೆಪಿ ನಾಯಕ, ಸಹ ಉಸ್ತುವಾರಿ ಸುನೀಲ್​ ದೇವ್​​ಧರ್​​​ ಈ ಬಗ್ಗೆ ಪ್ರತಿಕ್ರಿಯೆ ನೀಡಿ ‘ರಾಜ್ಯದಲ್ಲಿ ಬಿಜೆಪಿ ಪಕ್ಷ, ಟಿಡಿಪಿಯೊಂದಿಗೆ ಆಗಲೀ, ವೈಎಸ್​ಆರ್​ಸಿಯೊಟ್ಟಿಗೆ ಆಗಲೀ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಎರಡೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ ಮತ್ತು ಎರಡೂ ಪಾರ್ಟಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ’ ಎಂದು ಹೇಳಿದ್ದಾರೆ.

ಚಂದ್ರಬಾಬು ನಾಯ್ಡುಗೆ ಅವಕಾಶವಿಲ್ಲ
2018ರಲ್ಲಿ ಚಂದ್ರಬಾಬು ನಾಯ್ಡು ಎನ್​ಡಿಎ ಮೈತ್ರಿ ಬಿಟ್ಟು ಹೋದಾಗ, ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಗೃಹಸಚಿವ ಅಮಿತ್​ ಶಾ, ‘ಎನ್​ಡಿಎ ಒಕ್ಕೂಟದ ಬಾಗಿಲು ಚಂದ್ರಬಾಬು ನಾಯ್ಡು ಪಾಲಿಗೆ ಸದಾ ಮುಚ್ಚಿರುತ್ತದೆ’ ಎಂದು ಹೇಳಿದ್ದರು. ಆ ಮಾತುಗಳನ್ನು ಈಗ ಸುನೀಲ್​ ದೇವ್​​ಧರ್ ನೆನಪಿಸಿದ್ದಾರೆ. ಅಷ್ಟೇ ಅಲ್ಲ, ‘ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಪಕ್ಷದ ವರಿಷ್ಠರೇ ಮಾಡುತ್ತಾರೆ. ಕೇಂದ್ರ ಸಂಸದೀಯ ಮಂಡಳಿ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದೂ ಹೇಳಿದ್ದಾರೆ.

ಹಾಗೇ, ಪ್ರಧಾನಿ ಮೋದಿ ಮತ್ತು ಜಗನ್​ ರೆಡ್ಡಿ ಭೇಟಿಯ ಬಗ್ಗೆಯೂ ಮಾತನಾಡಿದ ಸುನೀಲ್​, ‘ಜಗನ್​ ರೆಡ್ಡಿ ಜತೆ ನಮಗೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಅವರೊಂದು ರಾಜ್ಯದ ಮುಖ್ಯಮಂತ್ರಿ, ಹೀಗಾಗಿ ಮೋದಿ ಜೀ ಜಗನ್​ ರೆಡ್ಡಿಯನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಆ ಕೃಷ್ಣ ಪರಮಾತ್ಮ ದುರ್ಯೋಧನನ್ನೂ ಅದೆಷ್ಟೋ ಬಾರಿ ಭೇಟಿಯಾಗಿಲ್ಲವೇ? ಹಾಗೇ ಮೋದಿಯವರೂ ಜಗನ್​ರನ್ನು ಭೇಟಿಮಾಡಿದ್ದಾರಷ್ಟೇ ಎಂದು ಸುನೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ವೈಎಸ್‌ಆರ್‌ಸಿಪಿ ತೊರೆದ ಸಿಎಂ ಜಗನ್‌ ರೆಡ್ಡಿ ತಾಯಿ; ಮಗಳಿದ್ದಲ್ಲಿಗೆ ಹೋಗುತ್ತೇನೆ ಎಂದ ವಿಜಯಮ್ಮ !

Exit mobile version