ನವ ದೆಹಲಿ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಆಡಿದ ಒಂದು ಮಾತಿನಿಂದ ಈಗ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿ ಇಡೀ ಪಕ್ಷದ ಎಲ್ಲರೂ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ ಸೇರಿ ಹಲವರು ಅಧೀರ್ ರಂಜನ್ ಚೌಧರಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡುತ್ತ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದು ಹೇಳಿದ್ದರು. ಅದೇ ಈಗ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರಪತ್ನಿ ಎಂದು ಉಲ್ಲೇಖಿಸುವ ಮೂಲಕ ದ್ರೌಪದಿ ಮುರ್ಮುಗೆ ಅವಹೇಳನ ಮಾಡಿದ್ದಾರೆ. ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಇಂದು ಬೆಳಗ್ಗೆ ಸಂಸತ್ತಿನ ಹೊರಭಾಗದಲ್ಲಿ ಬಿಜೆಪಿ ಸಂಸದರೆಲ್ಲ ಸೇರಿ ಅಧೀರ್ ರಂಜನ್ ಚೌಧರಿ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಮೃತಿ ಇರಾನಿ, “ಒಬ್ಬ ಬುಡಕಟ್ಟು ಜನಾಂಗದ ಗೌರವಾನ್ವಿತ ಮಹಿಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್‌ನ ಒಬ್ಬ ಸಂಸದ ರಾಷ್ಟ್ರಪತ್ನಿ ಎಂದು ಸಂಬೋಧಿಸುವ ಮೂಲಕ ಅವಮಾನಿಸಿದ್ದಾರೆ. ಆದರೆ ಸೋನಿಯಾ ಗಾಂಧಿ ಇದನ್ನು ವಿರೋಧಿಸಿಲ್ಲ. ಸುಮ್ಮನೆ ಕುಳಿತುಕೊಳ್ಳುವ ಮೂಲಕ ಅವರ ಅವಹೇಳನೆಯನ್ನು ಅನುಮೋದಿಸಿದ್ದಾರೆ, ದ್ರೌಪದಿ ಮುರ್ಮುರನ್ನು ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಎಂದು ಆಯ್ಕೆ ಮಾಡಿದಾಗಿನಿಂದಲೂ ಕಾಂಗ್ರೆಸ್ ನಿರಂತರವಾಗಿ ಅವರ ಬಗ್ಗೆ ಅವಹೇಳನ ಮಾಡುತ್ತಲೇ ಬಂದಿದೆʼ ಎಂದು ಆರೋಪಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ʼದ್ರೌಪದಿ ಮುರ್ಮುಗೆ ಅವಹೇಳನ ಮಾಡಿದ್ದು ಇಡೀ ರಾಷ್ಟ್ರದ ಮತ್ತು ಬುಡಕಟ್ಟು ಜನಾಂಗದ ಮಹಿಳೆಯರಿಗೆ ಮಾಡಿದ ಅವಮಾನ. ಇದು ಬಾಯಿತಪ್ಪಿ ಹೇಳಿದ ಮಾತಲ್ಲ. ಬೇಕಂತಲೇ, ಉದ್ದೇಶಪೂರ್ವಕವಾಗಿ ಆಡಿದ ಮಾತು. ಕೂಡಲೇ ಕಾಂಗ್ರೆಸ್ಸಿಗರು ಎಲ್ಲರೂ ಕ್ಷಮೆ ಕೇಳಬೇಕುʼ ಎಂದಿದ್ದಾರೆ. ಇನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼದ್ರೌಪದಿ ಮುರ್ಮುರನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ರಂಜನ್ ಅಧೀರ್ ಚೌಧರಿ ಇಡೀ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆʼ ಎಂದು ಆರೋಪಿಸಿದ್ದಾರೆ.
ಕ್ಷಮೆ ಕೇಳಿಯಾಗಿದೆ ಎಂದ ಸೋನಿಯಾ ಗಾಂಧಿ
ಬಿಜೆಪಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಂದು ತುರ್ತು ಸಭೆ ನಡೆಸಿ ಬಳಿಕ ಮಾತನಾಡಿ, ʼರಂಜನ್ ಅಧೀರ್ ಚೌಧರಿ ಈಗಾಗಲೇ ಕ್ಷಮೆ ಕೇಳಿಯಾಗಿದೆʼ ಎಂದಿದ್ದಾರೆ. ಇನ್ನೊಂದೆಡ ರಂಜನ್ ಅಧೀರ್ ಚೌಧರಿ, “ನಾನು ರಾಷ್ಟ್ರಪತಿ ಎಂದು ಹೇಳಲು ಹೋಗಿ ಬಾಯ್ತಪ್ಪಿನಿಂದ ರಾಷ್ಟ್ರಪತ್ನಿ ಎಂದಾಯಿತು” ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಇದೇ ಗಲಾಟೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪ ಮಧ್ಯಾಹ್ನ 2ಗಂಟೆಗೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: Draupadi Murmu | ಅತಿ ಕಿರಿಯ ರಾಷ್ಟ್ರಪತಿ ಮುರ್ಮು; ಉಳಿದವರು ಹುದ್ದೆಗೇರುವಾಗ ಎಷ್ಟು ವಯಸ್ಸಾಗಿತ್ತು?