ಗುಜರಾತ್ನಲ್ಲಿ 2021ರ ಸೆಪ್ಟೆಂಬರ್ನಲ್ಲಿ ಏಕಾಏಕಿ ಮುಖ್ಯಮಂತ್ರಿ ಬದಲಾವಣೆ ಮಾಡಿದಾಗ ರಾಜಕೀಯ ವಲಯದಲ್ಲಷ್ಟೇ ಅಲ್ಲ, ಸಾಮಾನ್ಯ ಜನರೂ ಹುಬ್ಬೇರಿಸಿದ್ದರು. ವಿಧಾನಸಭೆ ಚುನಾವಣೆಗೆ ಇನ್ನೊಂದೂವರೆ ವರ್ಷ ಬಾಕಿ ಇರುವಾಗ ಬಿಜೆಪಿಗೇಕೆ ಮುಖ್ಯಮಂತ್ರಿಯನ್ನು ಬದಲಿಸಬೇಕಿತ್ತು ಎಂಬ ಪ್ರಶ್ನೆ ದೊಡ್ಡ ಮಟ್ಟದಲ್ಲಿ ಚರ್ಚೆಯ ಸ್ವರೂಪ ಪಡೆದಿತ್ತು. ಪ್ರತಿಪಕ್ಷಗಳಂತೂ ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿಯನ್ನು ವಿಪರೀತ ಟೀಕಿಸಿದ್ದವು. ಆದರೆ ಅದೀಗ ವರದಾನವಾಗಿಯೇ ಪರಿಣಮಿಸಿದೆ ಎಂದು ಈ ವಿಧಾನಸಭೆ ಚುನಾವಣೆಯ ಫಲಿತಾಂಶ ತೋರಿಸಿದೆ.
ಬರೀ ಗುಜರಾತ್ನಲ್ಲಷ್ಟೇ ಅಲ್ಲ, ಉತ್ತರಾಖಂಡ್ನಲ್ಲೂ ಈ ಪ್ರಯೋಗ ಫಲಿಸಿತ್ತು. ಉತ್ತರಾಖಂಡ್ನಲ್ಲಿ ಕೂಡ ವಿಧಾನಸಭೆ ಚುನಾವಣೆಗೆ ಆರೇಳು ತಿಂಗಳು ಬಾಕಿ ಇರುವಾಗ ತೀರ್ಥ ಸಿಂಗ್ ರಾವತ್ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಿ, ಪುಷ್ಕರ್ ಸಿಂಗ್ ಧಮಿಯನ್ನು ಸಿಎಂ ಮಾಡಲಾಗಿತ್ತು. ಆಗಲೂ ಯಥಾ ಪ್ರಕಾರ ಬಿಜೆಪಿ ವಿರುದ್ಧ ಟೀಕೆ ಕೇಳಿಬಂದಿತ್ತು. ಹೀಗೆ ಸಿಎಂ ಬದಲಾವಣೆ ಮಾಡಿ ಬಿಜೆಪಿ ಸಾಧಿಸುವುದಾದರೂ ಏನು? ಹೀಗೆ ಮಾಡುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ ಹೊರತು ಇನ್ನೇನೂ ಆಗುವುದಿಲ್ಲ ಎಂಬಿತ್ಯಾದಿ ಮಾತುಗಳು ಕೇಳಿಬಂದಿದ್ದವು. ಆದರೆ 2022ರ ಫೆಬ್ರವರಿಯಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮತ್ತೆ ಪುಷ್ಕರ್ ಸಿಂಗ್ ಧಮಿಯವರೇ ಮುಖ್ಯಮಂತ್ರಿಯಾಗಿ, ಆಡಳಿತ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ಮಾಡಿರುವ ಬಿಜೆಪಿ ವರಿಷ್ಠರು, ಮುಂದಿನ ವರ್ಷದ ಚುನಾವಣೆಯ ಗೆಲುವಿಗೆ ಇದು ಪೂರಕವಾಗಬಲ್ಲದು ಎಂಬ ಆಶಯದಲ್ಲಿಯೇ ಇದ್ದಾರೆ.
ಆಡಳಿತ ವಿರೋಧಿ ಅಲೆ ತಡೆಯಲು ಸಹಾಯವಾಯ್ತು !
ಗುಜರಾತ್ ಮತ್ತು ಉತ್ತರಾಖಂಡ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಆಡಳಿತ ವಿರೋಧಿ ಅಲೆ ತಡೆಯಲು ಯಶಸ್ವಿಯಾಗಿದೆ ಎಂಬುದನ್ನು ಬಿಜೆಪಿ ಹಿರಿಯ ರಾಷ್ಟ್ರನಾಯಕರೊಬ್ಬರು ಹೇಳಿದ್ದಾರೆ. ಹಾಗೇ, ಇದೇ ಪ್ರಯೋಗವನ್ನೇಕೆ ಬಿಜೆಪಿ ಹೈಕಮಾಂಡ್ ಹಿಮಾಚಲ ಪ್ರದೇಶದಲ್ಲಿ ಮಾಡಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.
2021ರ ಸೆಪ್ಟೆಂಬರ್ನಲ್ಲಿ ಗುಜರಾತ್ನಲ್ಲಿ ವಿಜಯ್ ರೂಪಾಣಿಯವರು ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಸಹಜವಾಗಿಯೇ ಅಚ್ಚರಿಯಾಗಿತ್ತು. ಅವರು ಅತ್ಯುತ್ತಮವಾಗಿ ಹುದ್ದೆ ನಿಭಾಯಿಸುತ್ತಿದ್ದರೂ ಯಾಕೆ ಬದಲಾವಣೆ ಎಂಬ ಪ್ರಶ್ನೆ ಮೂಡಿತ್ತು. ಆದರೆ ಆಗ ಪಾಟೀದಾರ್ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಕೊಡದೆ ಇದ್ದರೆ, ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಆ ಸಮುದಾಯದ ಮತ ಬಿಜೆಪಿಗೆ ಕಡಿಮೆಯಾಗುವ ಸಾಧ್ಯತೆ ಖಂಡಿತ ಇತ್ತು. ಪಾಟೀದಾರ ಸಮುದಾಯಕ್ಕೆ ಸಿಎಂ ಹುದ್ದೆ ಬೇಕೆಂಬುದು ಹಲವು ಕಾಲದ ಬೇಡಿಕೆಯಾಗಿದ್ದರಿಂದ, ಅಂದು ಬಿಜೆಪಿ ಎಚ್ಚೆತ್ತುಕೊಂಡು ರೂಪಾಣಿಯವರನ್ನು ಕೆಳಗಿಳಿಸಿ, ಪಾಟೀದಾರ್ ಸಮುದಾಯದ ಪ್ರಬಲ ನಾಯಕ ಭೂಪೇಂದ್ರ ಪಟೇಲ್ರನ್ನು ಮುಖ್ಯಮಂತ್ರಿ ಮಾಡಿತು. ಅದು ಈ ಸಲದ ಚುನಾವಣೆಗೆ ಬಹುದೊಡ್ಡ ಪಾಸಿಟಿವ್ ಅಂಶವಾಗಿ ಪರಿಣಮಿಸಿದೆ ಎಂದು ಬಿಜೆಪಿ ನಾಯಕ ವಿಶ್ಲೇಷಿಸಿದ್ದಾರೆ.
ಇನ್ನು ಉತ್ತರಾಖಂಡ್ನಲ್ಲೂ ಅಲ್ಲಿನ ವಿಧಾನಸಭೆ ಚುನಾವಣೆ ಪೂರ್ವ ಎರಡು ಬಾರಿ ಮುಖ್ಯಮಂತ್ರಿಗಳ ಬದಲಾವಣೆಯಾಗಿದೆ. ಅಲ್ಲಿನ ಮುಖ್ಯಮಂತ್ರಿ ಮತ್ತು ಅವರ ಆಡಳಿತದ ವಿರುದ್ಧ ಅಸಮಾಧಾನ-ಬೇಸರ ವ್ಯಕ್ತವಾಗುತ್ತಿದ್ದಂತೆ ಅವರನ್ನು ಬಿಜೆಪಿ ಹೈಕಮಾಂಡ್ ಬದಲಿಸಿದೆ. ಅಲ್ಲಿ ಪುಷ್ಕರ್ ಸಿಂಗ್ ಧಮಿ ಆಡಳಿತ ಎಲ್ಲ ಸಮುದಾಯದವರಿಗೆ ಒಪ್ಪಿತ ಆಗಿದ್ದರಿಂದಲೇ, ಅವರು ಕಳೆದ ಚುನಾವಣೆಯಲ್ಲಿ ಸೋತರೂ, ಮತ್ತೆ ಅವರೇ ಉತ್ತರಾಖಂಡ್ನ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ ಎಂಬುದು ಬಿಜೆಪಿ ನಾಯಕನ ಅಂಬೋಣ.
ಹಿಮಾಚಲ ಪ್ರದೇಶದಲ್ಲೂ ಇದೇ ಪ್ರಯೋಗ ಬೇಕಿತ್ತು!
ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಆಡಳಿತದ ಬಗ್ಗೆ ಅಸಮಾಧಾನ ಇತ್ತು. ಕಳೆದ ವರ್ಷ ಹಿಮಾಚಲ ಪ್ರದೇಶದ ಮೂರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲೂ ಬಿಜೆಪಿ ಸೋತು, ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಅದಾದ ಬಳಿಕವಾದರೂ ಬಿಜೆಪಿ ಎಚ್ಚೆತ್ತಿಕೊಳ್ಳಬೇಕಿತ್ತು. ಜೈರಾಮ್ ಠಾಕೂರ್ರನ್ನು ಸಿಎಂ ಹುದ್ದೆಯಿಂದ ಇಳಿಸಿ, ಇನ್ಯಾರನ್ನಾದರೂ ಆ ಸ್ಥಾನಕ್ಕೆ ಏರಿಸಬಹುದಿತ್ತು. ಆ ನೆಲದ ಟ್ರೆಂಡ್ ನೋಡಿಕೊಂಡು ತೀರ್ಮಾನ ಮಾಡಬಹುದಿತ್ತು ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: Gujarat Election Results | ಡೈಮಂಡ್ ಸಿಟಿ ಸೂರತ್‌ನಲ್ಲಿ ಮಿನುಗದ ಆಪ್; ಹೆಚ್ಚಿದ ಬಿಜೆಪಿ ಮೌಲ್ಯ